
ಜಮೈಕಾ: ಒಂದೆಡೆ ಭಾರತ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಇಂಗ್ಲೆಂಡ್ ಗೆದ್ದ ವಿಚಾರ ವ್ಯಾಪಕವಾಗಿರುವಂತೆಯೇ ಅತ್ತ ವೆಸ್ಟ್ ಇಂಡೀಸ್ ತಂಡವನ್ನು ಪ್ರಬಲ ಆಸ್ಟ್ರೇಲಿಯಾ ತಂಡ ಕೇವಲ 27 ರನ್ ಗೇ ಆಲೌಟ್ ಮಾಡುವ ಮೂಲಕ ಕ್ರಿಕೆಟ್ ಇತಿಹಾಸದ ಅತ್ಯಪರೂಪದ ದಾಖಲೆ ನಿರ್ಮಿಸಿದೆ.
ಹೌದು.. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಜಮೈಕಾದಲ್ಲಿ ನಡೆದ ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ತಂಡವನ್ನು 176 ರನ್ ಗಳ ಅಂತರದಲ್ಲಿ ಮಣಿಸಿದೆ. ಅಚ್ಚರಿ ಎಂದರೆ ಈ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ ನಲ್ಲಿ ವಿಂಡೀಸ್ ತಂಡ ಕೇವಲ 27 ರನ್ ಗಳಿಗೇ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಮಕಾಡೆ ಮಲಗಿದೆ.
2ನೇ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಕೇವಲ 14.3 ಮಾತ್ರ ಎದುರಿಸಿ ಕೇವಲ 27 ರನ್ ಗಳಿಗೇ ಆಲೌಟ್ ಆಗಿದೆ. ಆ ಮೂಲಕ ಟೆಸ್ಟ್ ಕ್ರಿಕೆಟ್ 2ನೇ ಕನಿಷ್ಠ ಮೊತ್ತ ದಾಖಲಿಸಿದ ಎಂಬ ಕುಖ್ಯಾತಿಗೂ ವಿಂಡೀಸ್ ಪಾತ್ರವಾಗಿದೆ.
15 ಎಸೆತಗಳಲ್ಲಿ 5 ವಿಕೆಟ್
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಕೇವಲ 2.3 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ಪರ ತಮ್ಮ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
78 ವರ್ಷಗಳ ಹಳೆಯ ದಾಖಲೆ ಮುರಿದ Mitchell Starc!
ಇದೇ ಪಂದ್ಯದ ಅಂತಿಮ ಇನ್ನಿಂಗ್ಸ್ ನಲ್ಲಿ ಸ್ಟಾರ್ಕ್ ಒಟ್ಟು 6 ವಿಕೆಟ್ ಪಡೆದ ಸಾಧನೆ ಮಾಡಿದರು. ಅಂತೆಯೇ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಪಡೆದ ಜಗತ್ತಿನ ಮೊದಲ ಬೌಲರ್ ಎಂಬ ಕೀರ್ತಿಗೂ ಭಾಜನರಾದರು.
ಆ ಮೂಲಕ 78 ವರ್ಷಗಳ ಹಳೆಯ ದಾಖಲೆಯನ್ನು ಸ್ಟಾರ್ಕ್ ಮುರಿದಿದ್ದಾರೆ. ಈ ಹಿಂದೆ 1947 ರಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾದ ಎರ್ನಿ ಟೋಶಾಕ್ 19 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂತೆಯೇ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಮತ್ತು ಆಸ್ಟ್ರೇಲಿಯಾದ ಸ್ಕಾಟ್ ಬೋಲ್ಯಾಂಡ್ ಕೂಡ 19 ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.
400 ವಿಕೆಟ್ ಸಾಧನೆ
ಇನ್ನು ಸ್ಟಾರ್ಕ್ ಈ ಪಂದ್ಯದಲ್ಲಿ 7 ವಿಕೆಟ್ ಗಳನ್ನು ಪಡೆಯುವುದರೊಂದಿಗೆ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 402ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 400 ವಿಕೆಟ್ ಗಳಿಸಿದ ಆಸ್ಟ್ರೇಲಿಯಾದ ನಾಲ್ಕನೇ ಆಟಗಾರ ಎನಿಸಿಕೊಂಡರು. ಸ್ಟಾರ್ಕ್ ಗಿಂತ ಮುಂಚಿತವಾಗಿ ಶೇನ್ ವಾರ್ನ್, ಗ್ಲೆನ್ ಮೆಕ್‌ಗ್ರಾತ್ ಮತ್ತು ನಾಥನ್ ಲಿಯಾನ್ ಈ ಸಾಧನೆ ಮಾಡಿದ್ದಾರೆ.
Advertisement