
ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡವು ಟೆಸ್ಟ್ ತಂಡಕ್ಕೆ ಅನ್ಶುಲ್ ಕಾಂಬೋಜ್ ಅವರನ್ನು ಸೇರಿಸಿಕೊಂಡಿದೆ. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಅರ್ಶ್‌ದೀಪ್ ಸಿಂಗ್ ಮತ್ತು ಆಕಾಶ್ ದೀಪ್ ಲಭ್ಯತೆ ಬಗ್ಗೆ ಅನಿಶ್ಚಿತತೆಯಿರುವುದರಿಂದ ವೇಗಿ ಅನ್ಶುಲ್ ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸರಣಿಯಲ್ಲಿ ಸದ್ಯ ಇಂಗ್ಲೆಂಡ್ 2-1 ಮುನ್ನಡೆ ಸಾಧಿಸಿದ್ದು, ಓಲ್ಡ್ ಟ್ರಾಫರ್ಡ್‌ನಲ್ಲಿ ಜಯ ಸಾಧಿಸುವ ಮೂಲಕ ಸರಣಿಯನ್ನು ಸಮಬಲಗೊಳಿಸಲು ಶುಭಮನ್ ಗಿಲ್ ಮತ್ತು ತಂಡ ಎದುರು ನೋಡುತ್ತಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಅಭ್ಯಾಸದ ವೇಳೆ ಗಾಯಗೊಂಡ ನಂತರ ಅರ್ಶ್‌ದೀಪ್ ಸಿಂಗ್ ಅವರ ಕೈಗೆ ಹೊಲಿಗೆ ಹಾಕಲಾಗಿದ್ದು, ಚೇತರಿಸಿಕೊಳ್ಳಲು ಕನಿಷ್ಠ 10 ದಿನಗಳು ಬೇಕಾಗುವುದರಿಂದ ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆದಾರರು ನಿರ್ಧರಿಸಿದ್ದಾರೆ. ಜೂನ್ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಅನ್ಶುಲ್ ಭಾರತ ಎ ತಂಡದ ಭಾಗವಾಗಿದ್ದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ವೇಗಿ 3 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
'ಅರ್ಶದೀಪ್‌ಗೆ ಆಳವಾದ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ಅವರು ಸಂಪೂರ್ಣವಾಗಿ ಫಿಟ್ ಆಗಲು ಕನಿಷ್ಠ ಹತ್ತು ದಿನಗಳು ಬೇಕಾಗುತ್ತದೆ. ಆಯ್ಕೆದಾರರು ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದಾರೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಮುಂಚಿತವಾಗಿ ಭಾರತ ತಂಡವು ಹಸವಾಕು ಗಾಯದ ಸಮಸ್ಯೆಗಳಿಂದ ಕಂಗೆಟ್ಟಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಅರ್ಶದೀಪ್ ಅವರ ಕೈಗೆ ಗಾಯವಾಗಿದೆ. ಲಾರ್ಡ್ಸ್‌ನಲ್ಲಿ ನಡೆದ 3ನೇ ಟೆಸ್ಟ್‌ನ 4ನೇ ದಿನದಂದು ವೇಗಿ ಆಕಾಶ್ ದೀಪ್ ಅವರಿಗೂ ತೊಡೆ ನೋವು ಕಾಣಿಸಿಕೊಂಡಿತ್ತು.
ಈಮಧ್ಯೆ, ರಿಷಭ್ ಪಂತ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜಸ್ಪ್ರೀತ್ ಬುಮ್ರಾ ಎಸೆದ ಎಸೆತವನ್ನು ಬೌಂಡರಿಗೆ ಹೋಗದಂತೆ ತಡೆಯಲು ಪ್ರಯತ್ನಿಸುವಾಗ ಅವರ ಕೈಗೆ ಬಡಿದ ನಂತರ ಭಾರತದ ಉಪನಾಯಕ ಧ್ರುವ್ ಜುರೆಲ್ ಅವರು ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸಿದ್ದರು. ನಂತರ, ಅವರು ಲಾರ್ಡ್ಸ್ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾತ್ರ ಮಾಡಿದರು.
Advertisement