Nitish Kumar Reddy ಗೆ ಕಾನೂನು ಸಮಸ್ಯೆ: 5 ಕೋಟಿ ರೂ ನೀಡುವಂತೆ ದಾವೆ!
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡು ಭಾರತಕ್ಕೆ ಮರಳಿರುವ ಸ್ಟಾರ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಮತ್ತೊಂದು ಆಘಾತ ಎದುರಾಗಿದ್ದು, ಕೂಡಲೇ 5 ಕೋಟಿ ರೂ ನೀಡುವಂತೆ ದಾವೆ ಹೂಡಲಾಗಿದೆ.
ಹೌದು... ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ಬಿದ್ದಿರುವ ಟೀಂ ಇಂಡಿಯಾದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇದೀಗ ಕಾನೂನು ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ಭಾರತ ತಂಡದ ಭಾಗವಾಗಿದ್ದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಮೂರನೇ ಪಂದ್ಯದ ನಂತರ ಗಾಯಗೊಂಡು ಉಳಿದೆರಡು ಟೆಸ್ಟ್‌ಗಳಿಂದ ಹೊರಗುಳಿದಿದ್ದಾರೆ. ಭಾರತಕ್ಕೆ ಮರಳಿದ ನಂತರ, ನಿತೀಶ್ ಕುಮಾರ್ ರೆಡ್ಡಿ ಅವರ ಮಾಜಿ ಏಜೆಂಟ್ ಅವರ ವಿರುದ್ಧ 5 ಕೋಟಿ ರೂ. ಬಾಕಿ ಪಾವತಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
2024-25ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಹೊಸ ಮ್ಯಾನೇಜರ್ ನ್ನು ಆಯ್ಕೆ ಮಾಡಿಕೊಂಡರು. ಇದರಿಂದಾಗಿ ಅದಕ್ಕಿಂತ ಮೊದಲಿದ್ದ ಸ್ಕ್ವೇರ್ ದಿ ಒನ್ ಜೊತೆಗಿನ ಅವರ ನಾಲ್ಕು ವರ್ಷಗಳ ಸಂಬಂಧ ಕೊನೆಗೊಂಡಿತು. ಆದರೆ, ಬಾಕಿ ಹಣವನ್ನು ಪಾವತಿಸದ ಕಾರಣ ಸಂಸ್ಥೆ ಈಗ ರೆಡ್ಡಿ ಮೇಲೆ ಆರೋಪ ಮಾಡಿದೆ.
ಮೂಲಗಳ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್ ಆಲ್‌ರೌಂಡರ್ ರೆಡ್ಡಿ ನಿರ್ವಹಣಾ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಬಾಕಿ ಪಾವತಿಸಿಲ್ಲ ಎಂದು ಆರೋಪಿಸಿ ಸ್ಕ್ವೇರ್ ದಿ ಒನ್ ಪ್ರೈವೇಟ್ ಲಿಮಿಟೆಡ್ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 11(6) ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಹೈಕೋರ್ಟ್ ಜುಲೈ 28, ಸೋಮವಾರ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ವರದಿಯಲ್ಲಿ, ಸಂಸ್ಥೆಯು 2021 ರಿಂದ ನಿತೀಶ್ ಕುಮಾರ್ ರೆಡ್ಡಿ ಅವರ ಮ್ಯಾನೇಜ್‌ಮೆಂಟ್ ಮಾಡುತ್ತಿದೆ, ನಾಲ್ಕು ವರ್ಷಗಳ ಸಹಯೋಗದ ಅವಧಿಯಲ್ಲಿ ಅವರಿಗೆ ಅನೇಕ ಜಾಹೀರಾತುಗಳು ಮತ್ತು ಬ್ರಾಂಡ್ ಅನುಮೋದನೆಗಳನ್ನು ಸಹ ಏರ್ಪಡಿಸಿದೆ ಎಂದು ಹೇಳಲಾಗಿದೆ.
ಇಂತಹ ಸಾಕಷ್ಟು ಪ್ರಕರಣಗಳು ನ್ಯಾಯಾಲಯದವರೆಗೂ ಹೋಗದೆ, ಖಾಸಗಿಯಾಗಿ ಪರಿಹಾರವಾಗಿದ್ದು, ಈ ಪ್ರಕರಣದಲ್ಲಿ ನಿತೀಶ್ ಹಣವನ್ನು ಪಾವತಿಸಲು ನಿರಾಕರಿಸಿದ್ದು ಮತ್ತು ಒಪ್ಪಂದಗಳನ್ನು ತಾವೇ ಪಡೆದುಕೊಂಡಿರುವುದಾಗಿ ಹೇಳಿಕೊಂಡಿರುವುದರಿಂದ ಪರಿಸ್ಥಿತಿ ಈ ಹಂತಕ್ಕೆ ತಲುಪಲು ಕಾರಣ ಎಂದು ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ