
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ಅಂತಿಮ ಕ್ಷಣದಲ್ಲಿ ನಡೆದ Handshake ಹೈಡ್ರಾಮಾಕ್ಕೆ ಸಂಬಂಧಿಸಿದಂತೆ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡ್ ತಂಡಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.
ನಿನ್ನೆ ಮ್ಯಾಂಚೆಸ್ಟರ್ ನಲ್ಲಿ ಮುಕ್ತಾಯವಾದ 4ನೇ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯವಾಗಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಭರ್ಜರಿ ಬ್ಯಾಟಿಂಗ್ ಇಂಗ್ಲೆಂಡ್ ತಂಡದ ಆಟಗಾರರ ಕಂಗೆಡಿಸಿತ್ತು.
ಇದು ಯಾವ ಮಟ್ಟಿಗೆ ಅಂದರೆ ಸ್ವತಃ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಂತಿಮ ಸೆಷನ್ ನಲ್ಲಿ ಇನ್ನೂ 15 ಓವರ್ ಗಳು ಬಾಕಿ ಇರುವಾಗಲೇ ಡ್ರಾ ಮಾಡಿಕೊಳ್ಳೋಣ ಎಂದು ಒತ್ತಾಯಿಸಿದರು.
ಆದರೆ ಭಾರತ ತಂಡ ಇದಕ್ಕೆ ಒಪ್ಪಲಿಲ್ಲ. ಇದು ಬೆನ್ ಸ್ಟೋಕ್ಸ್ ಆಕ್ರೋಶಕ್ಕೆ ಕಾರಣವಾಗಿ ಪಂದ್ಯ ಮುಕ್ತಾಯದ ಬಳಿಕ ಅವರು ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಜೊತೆ ಹ್ಯಾಂಡ್ ಶೇಕ್ ಮಾಡಲಿಲ್ಲ.
ಕೋಚ್ ಗೌತಮ್ ಗಂಭೀರ್ ಕಿಡಿ
ಇನ್ನು ಈ ಹ್ಯಾಂಡ್ ಶೇಕ್ ಪ್ರಸಂದ ಕುರಿತು ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಚ್ ಗೌತಮ್ ಗಂಭೀರ್ ಅಕ್ಷರಶಃ ಇಂಗ್ಲೆಂಡ್ ಆಟಗಾರರ ವಿರುದ್ಧ ಮುಗಿಬಿದ್ದರು. ಬೆನ್ ಸ್ಟೋಕ್ಸ್ ನಡೆಯನ್ನು ತೀವ್ರವಾಗಿ ಖಂಡಿಸಿದ ಗೌತಮ್ ಗಂಭೀರ್, 'ಇದೇನಾ ಕ್ರೀಡಾ ಸ್ಪೂರ್ತಿ.. ಅದೇ ಜಾಗದಲ್ಲಿ ಇಂಗ್ಲೆಂಡ್ ಆಟಗಾರರಿದ್ದರೆ ಬೆನ್ ಸ್ಟೋಕ್ಸ್ ಡ್ರಾ ಮಾಡಿಕೊಳ್ಳುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ.
'ತಂಡದ ಇಬ್ಬರು ಆಟಗಾರರು ಶತಕದ ಸಮೀಪದಲ್ಲಿದ್ದಾಗ ಪಂದ್ಯವನ್ನು ಡಿಕ್ಲೇರ್ ಮಾಡಿಕೊಳ್ಳುವುದು ಸರಿಯಲ್ಲ. ಒಂದು ವೇಳೆ ಇಂಗ್ಲೆಂಡ್ ಆಟಗಾರರು ಶತಕದ ಸಮೀಪದಲ್ಲಿದ್ದಿದ್ದರೆ ಆಗಲೂ ಬೆನ್ ಸ್ಟೋಕ್ಸ್ ಡಿಕ್ಲೇರ್ ಮಾಡಿಕೊಳ್ಳುತ್ತಿದ್ದರೆ?.. ತಂಡದ ಇಬ್ಬರು ಆಟಗಾರರು 90 ಮತ್ತು 85 ರನ್‌ಗಳನ್ನು ಬಾರಿಸಿ ಮೈದಾನದಲ್ಲಿದ್ದಾಗ, ಡಿಕ್ಲೇರ್ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
ಅಂತೆಯೇ ಇದು ಶತಕದ ಸಮೀಪದಲ್ಲಿರುವ ಇಬ್ಬರೂ ಆಟಗಾರರ ಮನೋಬಲದ ಮೇಲೆ ಪರಿಣಾಮ ಬೀರುತ್ತದೆ. ಪಂದ್ಯದ ಫಲಿತಾಂಶ ಏನೆಂದೂ ಗೊತ್ತಿದ್ದರೂ, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಶತಕಕ್ಕೆ ಕಾಯುವ ನಮ್ಮ ನಿರ್ಧಾರ ಸರಿಯಾಗಿತ್ತು. ಅದು ಅವರ ಆಯ್ಕೆ. ಅವರು ಆ ರೀತಿಯಲ್ಲಿ ಆಡಲು ಬಯಸಿದರೆ, ಅದು ಅವರ ಆಯ್ಕೆ. ಆ ಇಬ್ಬರು ವ್ಯಕ್ತಿಗಳು ಶತಕಕ್ಕೆ ಅರ್ಹರುʼ ಎಂದು ನಾನು ಭಾವಿಸುತ್ತೇನೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
Advertisement