
ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು, ಸರಣಿಯನ್ನು ಜೀವಂತವಾಗಿರಿಸಿದೆ ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್‌ನ ಹಲವಾರು ದಿಗ್ಗಜರಿಂದ ಪ್ರಶಂಸೆ ಗಳಿಸಿದೆ. ಒತ್ತಡದಲ್ಲಿಯೂ ಟೆಸ್ಟ್ ಪಂದ್ಯವನ್ನು ಉಳಿಸುವಲ್ಲಿ ಭಾರತೀಯ ಬ್ಯಾಟಿಂಗ್ ಘಟಕವು ತೋರಿಸಿದ ಧೈರ್ಯ ಮತ್ತು ಪಾತ್ರವನ್ನು ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಶ್ಲಾಘಿಸಿದ್ದಾರೆ. ಕೆಎಲ್ ರಾಹುಲ್, ಶುಭಮನ್ ಗಿಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಸಚಿನ್, ಇದು ಟೀಂ ಇಂಡಿಯಾದ 'ಅದ್ಭುತ ಕಂಬ್ಯಾಕ್' ಎಂದು ಕರೆದಿದ್ದಾರೆ.
'ಭಾರತ-ಇಂಗ್ಲೆಂಡ್ ವಿಷಯಕ್ಕೆ ಬಂದರೆ, ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಪಂದ್ಯವು ಸರಣಿಯನ್ನು ಜೀವಂತವಾಗಿಟ್ಟಿದೆ. ಅದ್ಭುತವಾಗಿ ಪುನರಾಗಮನ ಮಾಡಿದ್ದಕ್ಕಾಗಿ ಟೀಂ ಇಂಡಿಯಾಗೆ ಅಭಿನಂದನೆಗಳು. ಕೆಎಲ್ ರಾಹುಲ್, ಶುಭಮನ್ ಗಿಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಉತ್ತಮ ಹೋರಾಟದ ಮನೋಭಾವವನ್ನು ತೋರಿಸಿದರು. ಅಂತಿಮ ಟೆಸ್ಟ್‌ಗೆ ಶುಭವಾಗಲಿ. ಗೋ ಇಂಡಿಯಾ!' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಭಾರತ ತನ್ನ ಎರಡನೇ ಇನಿಂಗ್ಸ್‌ನ ಆರಂಭದಲ್ಲಿಯೇ ಶೂನ್ಯಕ್ಕೆ ಆರಂಭಿಕ ಆಟಗಾರರಿಬ್ಬರನ್ನೂ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ, ಕೆಎಲ್ ರಾಹುಲ್ ಮತ್ತು ಗಿಲ್ 188 ರನ್‌ಗಳ ಬೃಹತ್ ಜೊತೆಯಾವಾಡುವ ಮೂಲಕ ತಂಡಕ್ಕೆ ನೆರವಾದರು. ರಾಹುಲ್ 90 ರನ್‌ಗಳಿಸಿದರು. ಆದರೆ, ಗಿಲ್ 103 ರನ್ ಗಳಿಸುವ ಮೂಲಕ ಸರಣಿಯಲ್ಲಿ ನಾಲ್ಕನೇ ಶತಕವನ್ನು ದಾಖಲಿಸಿದರು.
5ನೇ ದಿನದ ಕೊನೆಯ ಎರಡು ಅವಧಿಗಳಲ್ಲಿ, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ದೃಢನಿಶ್ಚಯದಿಂದ ತಂಡಕ್ಕೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಂಡರು. ಅವರ ಅಜೇಯ 203 ರನ್‌ಗಳ ಜೊತೆಯಾಟವು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಜಡೇಜಾ ಅಜೇಯ 107 ರನ್‌ಗಳಿಸಿದರು ಮತ್ತು ವಾಷಿಂಗ್ಟನ್ ಸುಂದರ್ 101 ರನ್‌ಗಳೊಂದಿಗೆ ತಮ್ಮ ಮೊದಲ ಟೆಸ್ಟ್ ಶತಕವನ್ನು ದಾಖಲಿಸಿದರು.
ವಿವಿಎಸ್ ಲಕ್ಷ್ಮಣ್ ಕೂಡ ಭಾರತ ತಂಡ ಹೋರಾಟದ ಮನೋಭಾವವನ್ನು ಶ್ಲಾಘಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, 'ಮ್ಯಾಂಚೆಸ್ಟರ್‌ನಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಕೆಎಲ್ ರಾಹುಲ್, ಶುಭಮನ್, ಜಡ್ಡು ಮತ್ತು ವಾಶಿ ಅವರ ಅದ್ಭುತ ಪ್ರದರ್ಶನ ಕಾರಣವಾಯಿತು. ಭಾರತ ಎದುರಿಸಿದ ಸವಾಲಿನ ಪರಿಸ್ಥಿತಿಯನ್ನು ಪರಿಗಣಿಸಿದರೆ ಇದು ನಿಜಕ್ಕೂ ಮಹತ್ವದ ಸಾಧನೆಯಾಗಿದೆ. ಕೊನೆಯ ಪಂದ್ಯಕ್ಕೆ ಶುಭವಾಗಲಿ, ಟೀಂ ಇಂಡಿಯಾ' ಎಂದು ಬರೆದಿದ್ದಾರೆ.
ಈ ಫಲಿತಾಂಶದ ಪರಿಣಾಮವಾಗಿ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಇನ್ನೂ 2-1 ಮುನ್ನಡೆಯಲ್ಲಿದೆ. ಗುರುವಾರದಿಂದ ಓವಲ್‌ನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ರೋಮಾಂಚಕಾರಿ ಅಂತ್ಯಕ್ಕೆ ವೇದಿಕೆ ಸಜ್ಜಾಗಿದೆ.
Advertisement