
ಏಷ್ಯಾ ಕಪ್ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಘೋಷಿಸಿದಾಗಿನಿಂದ, ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರಿಂದ ಹಲವಾರು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ ಹೆಚ್ಚಿನವರು ಭಾರತವು ಏಷ್ಯಾಕಪ್‌ನಲ್ಲಿ ಪಾಕಿಸ್ತಾನದೊಂದಿಗೆ ಆಡುವುದು ಬೇಡ ಎಂದು ಹೇಳುತ್ತಿದ್ದಾರೆ. ಈ ವರ್ಷದ ಏಪ್ರಿಲ್ 22 ರಂದು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟವು. ಇದು ಸೆಪ್ಟೆಂಬರ್ 9 ರಿಂದ 28ರವರೆಗೆ ನಡೆಯಲಿರುವ ಏಷ್ಯಾ ಕಪ್ 2025ರ ಮೇಲೂ ಪರಿಣಾಮ ಬೀರಿದೆ. ಆದಾಗ್ಯೂ, ಈ ಪಂದ್ಯಾವಳಿಯನ್ನು ಸದ್ಯ ರದ್ದುಗೊಳಿಸಿಲ್ಲ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯವನ್ನು ಆಡಲು ಭಾರತ ಕ್ರಿಕೆಟ್ ತಂಡಕ್ಕೆ ಸರ್ಕಾರ ಅನುಮತಿ ನೀಡುವುದಿದ್ದರೆ, ಅದು ಆಗಬೇಕು ಎಂದಿದ್ದಾರೆ.
ಭಾರತವು ಸೆಪ್ಟೆಂಬರ್ 14 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಎರಡೂ ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆದರೆ, ಅವು ಮತ್ತೆ ಸೆಪ್ಟೆಂಬರ್ 21 ರಂದು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಫೈನಲ್‌ಗೆ ಪ್ರವೇಶಿಸಿದರೆ ಸೆಪ್ಟೆಂಬರ್ 28 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಾಧ್ಯತೆಯೂ ಇದೆ.
'ಭಾರತ-ಪಾಕಿಸ್ತಾನ ಕ್ರಿಕೆಟ್ ಯಾವಾಗಲೂ ಸರ್ಕಾರದ ಅನುಮತಿಯ ಮೇಲೆ ಅವಲಂಬಿತವಾಗಿದೆ. ಸರ್ಕಾರವು ಆಟ ನಡೆಯಲು ಅವಕಾಶ ನೀಡಿದರೆ, ಅದು ಸಂಭವಿಸುತ್ತದೆ. ಭಯೋತ್ಪಾದನೆ ನಿಲ್ಲಬೇಕು ಎಂದು ನಾನು ಮೊದಲೇ ಹೇಳಿದ್ದೇನೆ. ಸರ್ಕಾರವು ಅನುಮತಿ ನೀಡಿದರೆ, ಪಂದ್ಯವನ್ನು ಮುಂದುವರಿಸಬೇಕು' ಎಂದು ಸೌರವ್ ಗಂಗೂಲಿ NDTV ಗೆ ಹೇಳಿದರು.
'ಇದು ಏಷ್ಯಾ ಕಪ್, ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಏಷ್ಯಾ ಕಪ್ ಮತ್ತು ವಿಶ್ವಕಪ್‌ಗಳನ್ನು ಆಡುತ್ತಿವೆ. ಆದರೆ, ಸ್ವಲ್ಪ ಸಮಯದಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಪಂದ್ಯಗಳು ನಡೆಯುತ್ತಿಲ್ಲ' ಎಂದರು.
ಆದಾಗ್ಯೂ, ಏಪ್ರಿಲ್‌ನಲ್ಲಿ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಎಲ್ಲ ಸಂಬಂಧಗಳನ್ನು ನಿಲ್ಲಿಸಬೇಕು ಎಂದು ಗಂಗೂಲಿ ಹೇಳಿದ್ದರು. ಎಎನ್‌ಐ ಜೊತೆ ಮಾತನಾಡಿದ ಗಂಗೂಲಿ, 'ಶೇ 100 ರಷ್ಟು ಇದನ್ನು (ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಮುರಿಯುವುದು) ಮಾಡಬೇಕು. ಕಠಿಣ ಕ್ರಮ ಅಗತ್ಯ. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತವೆ ಎಂಬುದು ತಮಾಷೆಯಲ್ಲ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದರು.
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಭಾರತದ ಪ್ರದರ್ಶನವನ್ನು ಗಂಗೂಲಿ ಶ್ಲಾಘಿಸಿದರು. 'ಮ್ಯಾಂಚೆಸ್ಟರ್‌ನಲ್ಲಿ ಭಾರತ ತಂಡ ತುಂಬಾ ಚೆನ್ನಾಗಿ ಆಡಿದೆ ಎಂದು ನಾನು ಭಾವಿಸಿದ್ದೇನೆ. ರಾಹುಲ್, ಗಿಲ್, ಜಡೇಜಾ, ವಾಷಿಂಗ್ಟನ್ ಆಡಿದ ರೀತಿ ಗಮನಾರ್ಹವಾಗಿದೆ' ಎಂದು ಹೇಳಿದರು.
'ಒಂದು ವಾರದ ಹಿಂದೆ ಅವರು ಲಾರ್ಡ್ಸ್‌ನಲ್ಲಿ 193 ರನ್ ಚೇಸ್ ಮಾಡಬೇಕಾಗಿತ್ತು. ಅವರು ಸರಣಿಯಲ್ಲಿ ತೋರಿದ ಬ್ಯಾಟ್ಸ್‌ಮನ್‌ಶಿಪ್‌ನ ಗುಣಮಟ್ಟವು ಅವರು ಟೆಸ್ಟ್ ಪಂದ್ಯವನ್ನು ಗೆಲ್ಲುತ್ತಾರೆ ಎಂದು ಭಾವಿಸುವಂತೆ ಮಾಡಿತು. ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಅಮೋಘ ಫಾರ್ಮ್‌ನಲ್ಲಿದೆ. ರಾಹುಲ್, ಗಿಲ್, ಪಂತ್, ಜಡೇಜಾ, ವಾಷಿಂಗ್ಟನ್ ಸುಂದರ್ ಆಟವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವುದನ್ನು ನೋಡುವುದು ತುಂಬಾ ಒಳ್ಳೆಯದು' ಎಂದರು.
Advertisement