
ನವದೆಹಲಿ: ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್ (ಡಬ್ಲ್ಯುಸಿಎಲ್) ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಆಡಲು ನಿರಾಕರಿಸುವ ಮೂಲಕ ಇಂಡಿಯಾ ಚಾಂಪಿಯನ್ಸ್ ಆಟಗಾರರು ಪಾಕ್ ತಂಡದ ನಾಯಕ ಶಾಹಿದ್ ಅಫ್ರಿದಿಗೆ ಶಾಕ್ ನೀಡಿದ್ದಾರೆ.
ಟೂರ್ನಿಯ ಲೀಗ್ ಹಂತದಲ್ಲೂ ಪಾಕಿಸ್ತಾನ ವಿರುದ್ದ ಆಡಲು ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರು ನಿರಾಕರಿಸಿದ್ದರಿಂದ ಪಂದ್ಯ ರದ್ದುಗೊಂಡಿತ್ತು. ಈಗ ಭಾರತೀಯರ ಭಾವನೆಗಳಿಗೆ ಸ್ಪಂದಿಸಿ ಸೆಮಿಫೈನಲ್‌ನಲ್ಲೂ ಆಡಲು ಆಟಗಾರರು ಹಿಂದೇಟು ಹಾಕಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿತ್ತಲ್ಲದೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.
ಇದೇ ಕಾರಣಕ್ಕೆ ಭಾರತ ಚಾಂಪಿಯನ್ಸ್ ತಂಡ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಡುವುದಿಲ್ಲ ಎಂದು ಹೇಳಿದೆ. ಎಡ್ಜ್ ಬಾಸ್ಟನ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಸೆಮಿಫೈನಲ್ ಪಂದ್ಯ ಗುರುವಾರ ನಿಗದಿಯಾಗಿತ್ತು. ಆದರೆ ಇದೀಗ ಭಾರತ ಪಂದ್ಯದಿಂದ ಹಿಂದೆ ಸರಿದಿರುವುದರಿಂದ ಪಾಕಿಸ್ತಾನ ನೇರವಾಗಿ ಫೈನಲ್ ಗೆ ಅರ್ಹತೆ ಗಿಟ್ಟಿಸಿದೆ.
'ಅದ್ ಯಾವ ಮುಖ ಇಟ್ಕೊಂಡು ಆಡ್ತಾರೆ' ಎಂದಿದ್ದ ಶಾಹಿದ್ ಅಫ್ರಿದಿ ಪೇಚು ಮೊರೆ ಹಾಕಿ ನಿಂತ
ಇನ್ನು ಈ ಟೂರ್ನಿಯಲ್ಲಿ ಭಾರತ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಎದುರು ಆಡುವುದಿಲ್ಲ ಎಂದು ಹೇಳಿತ್ತು. ಈ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ, ಈಗ ಭಾರತ ತಂಡ ನಮ್ಮ ವಿರುದ್ಧ ಆಡುವುದಿಲ್ಲಎಂದು ಹೇಳುತ್ತಿದೆ. ಒಂದು ವೇಳೆ ನಾವು ಸೆಮೀಸ್ ಗೆ ಬಂದರೆ ಆಗಲೂ ಅವರು ಆಡುವುದಿಲ್ಲವೇ? ಆಗ ಯಾವ ಮುಖ ಇಟ್ಕೊಂಡು ಟೂರ್ನಿಯಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನಿಸಿದ್ದರು.
ಆದರೆ ಇದೀಗ ಭಾರತ ತಂಡ ಸೆಮೀಸ್ ನಲ್ಲೂ ಪಾಕಿಸ್ತಾನ ತಂಡವನ್ನು ಎದುರಿಸುವುದಿಲ್ಲ ಎಂದು ಘೋಷಣೆ ಮಾಡಿದ್ದು, ಮಾತ್ರವಲ್ಲದೇ ಪಾಕಿಸ್ತಾನ ತಂಡದ ಎದುರೇ ಭಾರತ ತಂಡ ಮೈದಾನ ತೊರೆಯಿತು. ಭಾರತ ತಂಡ ಮೈದಾನ ತೊರೆಯುತ್ತಿರುವಾಗ ಮೊದಲ ಅಂತಸ್ತಿನಲ್ಲಿ ಪೆವಿಲಿಯನ್ ನಲ್ಲಿ ನಿಂತಿದ್ದ ಅಫ್ರಿದಿ ಪೇಚು ಮೊರೆ ಹಾಕಿ ನಿಂತಿದ್ದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಯುವರಾಜ್ ಸಿಂಗ್, ಸುರೇಶ್ ರೈನಾ, ಶಿಖರ್ ಧವನ್ ಮತ್ತು ತಂಡದ ಇತರ ಸದಸ್ಯರು ಭಾರತ ತಂಡ ಪಂದ್ಯದಿಂದ ಹಿಂದೆ ಸರಿದ ನಂತರ ಆಟಗಾರರು ಮೈದಾನ ತೊರೆಯುವಾಗ ಕ್ರೀಡಾಂಗಣದ ಬಾಲ್ಕನಿಯಲ್ಲಿ ನಿಂತಿದ್ದ ಅಫ್ರಿದಿ ಅಸಹಾಯಕರಾಗಿ ವೀಕ್ಷಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
WCL 2025 ಸೆಮಿಫೈನಲ್ ನಾಕೌಟ್ ಪಂದ್ಯವಾದ್ದರಿಂದ ಭಾರತಕ್ಕೆ ಅವರ ವಿರುದ್ಧ ಆಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅಫ್ರಿದಿ ಭಾವಿಸಿದ್ದರು, ಆದರೆ ಯುವರಾಜ್ ಸಿಂಗ್ ನೇತೃತ್ವದ ತಂಡವು ಪಾಕಿಸ್ತಾನದ ವಿರುದ್ಧ ಆಡುವ ಬದಲು ತಲೆ ಎತ್ತಿ ಹೊರನಡೆಯಲು ನಿರ್ಧರಿಸಿತು. ಭಾರತ ಚಾಂಪಿಯನ್ಸ್ ತಮ್ಮ ಹಿಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ತಂಡವನ್ನು ಅದ್ಭುತವಾಗಿ ಸೋಲಿಸಿದ ನಂತರ ಸೆಮಿಫೈನಲ್ ತಲುಪಿತ್ತು.
ಆಯೋಜಕರು ಹೇಳಿದ್ದೇನು?
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೂರ್ನಿ ಆಯೋಜಕರು, 'ಸೆಮಿಫೈನಲ್‌ನಿಂದ ಹಿಂದೆ ಸರಿಯುವ ಭಾರತದ ಚಾಂಪಿಯನ್ ತಂಡದ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಪಾಕಿಸ್ತಾನ ಚಾಂಪಿಯನ್ ತಂಡ ಸ್ಪರ್ಧಿಸುವ ಸಿದ್ಧತೆಯನ್ನು ನಾವು ಸಮಾನವಾಗಿ ಗೌರವಿಸುತ್ತೇವೆ. ಎಲ್ಲಾ ಅಂಶಗಳನ್ನು ಪರಿಗಣಿಸಿ, ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇದರ ಪರಿಣಾಮವಾಗಿ, ಪಾಕಿಸ್ತಾನ ಚಾಂಪಿಯನ್ಸ್ ಫೈನಲ್‌ಗೆ ಮುನ್ನಡೆಯುತ್ತದೆ' ಎಂದು ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟೂರ್ನಿಗೆ ಮುಖ್ಯ ಪ್ರಾಯೋಜಕರಾದ 'ಈಸ್‌ಮೈಟ್ರಿಪ್' ಕೂಡ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಪ್ರಾಯೋಜಕತ್ವವನ್ನು ವಹಿಸುವುದಿಲ್ಲ ಎಂದು ಹೇಳಿದೆ. ಈ ಕುರಿತು ಈಸ್‌ಮೈಟ್ರಿಪ್‌ನ ಸಹ ಸ್ಥಾಪಕರಾದ ನಿಶಾಂತ್ ಪಿಟ್ಟಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಕ್ರಿಕೆಟ್ ಹಾಗೂ ಭಯೋತ್ಪಾದನೆ ಒಂದಾಗಿ ಸಾಗಲು ಸಾಧ್ಯವಿಲ್ಲ. ನಾವು ಭಾರತೀಯರೊಂದಿಗೆ ನಿಲ್ಲುತ್ತೇವೆ. ಕೆಲವು ವಿಷಯಗಳು ಕ್ರೀಡೆಗಿಂತಲೂ ಮಿಗಿಲಾಗಿವೆ. ವ್ಯಾಪಾರಕ್ಕಿಂತ ದೇಶ ಮೊದಲು' ಎಂದು ಹೇಳಿದ್ದಾರೆ.
WCL ನ ಸಂಘಟಕರು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಕ್ರೀಡೆಯ ಶಕ್ತಿಯನ್ನು ಯಾವಾಗಲೂ ನಂಬಿದ್ದರೂ, "ಸಾರ್ವಜನಿಕ ಭಾವನೆಗಳನ್ನು ಯಾವಾಗಲೂ ಗೌರವಿಸಬೇಕು - ಎಲ್ಲಾ ನಂತರ, ನಾವು ಮಾಡುವ ಎಲ್ಲವೂ ನಮ್ಮ ಪ್ರೇಕ್ಷಕರಿಗಾಗಿ" ಎಂದು ಅವರು ಅರಿತುಕೊಂಡಿದ್ದಾರೆ ಎಂದು ಹೇಳಿದರು.
Advertisement