
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯ ಇಂದು ನಡೆದ Qualifier 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ Qualifier 2 ಪಂದ್ಯದಲ್ಲಿ ಮುಂಬೈ ನೀಡಿದ್ದ 204 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 5 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.
ಪಂಜಾಬ್ ಗೆ ಆರಂಭಿಕ ಆಘಾತ
ಇನ್ನು 204 ರನ್ ಗಳ ಗುರಿ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಗೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಪ್ರಭ್ ಸಿಮ್ರನ್ ಸಿಂಗ್ ಕೇವಲ 6 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ಔಟಾದರು. ಮತ್ತೊಂದು ತುದಿಯಲ್ಲಿದ್ದ ಪ್ರಿಯಾಂಶ್ ಆರ್ಯ ಕೂಡ 20 ರನ್ ಗಳಿಸಿ ಅಶ್ವನಿ ಕುಮಾರ್ ಬೌಲಿಂಗ್ ನಲ್ಲಿ ಔಟಾದರು.
ಜಾಶ್ ಇಂಗ್ಲಿಸ್ ಸಮಯೋಚಿತ ಬ್ಯಾಟಿಂಗ್
ಇನ್ನು 3ನೇ ಕ್ರಮಾಂಕದಲ್ಲಿ ಬಂದ ಜಾಶ್ ಇಂಗ್ಲಿಸ್ 21 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 38 ರನ್ ಗಳಿಸಿ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.
ಪಂದ್ಯಕ್ಕೆ ಮಳೆ ಅಡ್ಡಿ
ಮಳೆ ಪೀಡಿತ ಈ ಪಂದ್ಯ ಬರೊಬ್ಬರಿ ಎರಡು ಗಂಟೆ 15 ನಿಮಿಷ ತಡವಾಗಿ ಆರಂಭವಾದರೂ, ಓವರ್‌ಗಳನ್ನು ಕಡಿಮೆ ಮಾಡಲಾಗಿಲ್ಲ.
ಶ್ರೇಯಸ್ ಅಯ್ಯರ್-ನೇಹಲ್ ವಧೇರಾ ಜುಗಲ್ ಬಂದಿ
ಈ ಹಂತದಲ್ಲಿ ಜೊತೆಗೂಡಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ನೇಹಲ್ ವಧೇರಾ ಜೋಡಿ ಆಕರ್ಷಕ ಜೊತೆಯಾಟವಾಡಿದರು. ಆದರೆ ಈ ಹಂತದಲ್ಲಿ 29 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 48 ರನ್ ಗಳಿಸಿದ್ದ ನೇಹಲ್ ವಧೇರಾ ಅಶ್ವನಿ ಕುಮಾರ್ ಬೌಲಿಂಗ್ ನಲ್ಲಿ ಔಟಾದರು.
ಆ ಮೂಲಕ ಕೇವಲ 2 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಮತ್ತೊಂದು ಬದಿಯಲ್ಲಿದ್ದ ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿದರು. ಬಳಿಕ ಕ್ರೀಸ್ ಗೆ ಬಂದ ಶಶಾಂಕ್ ಸಿಂಗ್ ಕೇವಲ 2 ರನ್ ಗಳಿಸಿ ರನೌಟ್ ಗೆ ಬಲಿಯಾದರು.
ಶ್ರೇಯಸ್ ಅಯ್ಯರ್ ಹ್ಯಾಟ್ರಿಕ್ ಸಿಕ್ಸರ್
ಇನ್ನು ಚೇಸಿಂಗ್ ವೇಳೆ ಪಂಜಾಬ್ ಇನ್ನಿಂಗ್ಸ್ ನ 13ನೇ ಓವರ್ ನಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಾ ಎಸೆದ ಓವರ್ ನಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮೊಮೆಂಟ್ ಅನ್ನು ತಮ್ಮತ್ತ ಸೆಳೆದುಕೊಂಡರು. ಅಷ್ಟೂ ಹೊತ್ತು ಉತ್ತಮ ಓವರ್ ಗಳ ಮೂಲಕ ಪಂಜಾಬ್ ಅನ್ನು ಕಟ್ಟಿ ಹಾಕಿದ್ದ ಮುಂಬೈ ಹಾರ್ದಿಕ್ ಎಸೆದ ಆ ಓವರ್ ನಲ್ಲಿ ಕೊಂಚ ದುಬಾರಿಯಾಯಿತು. ಆ ಓವರ್ ನಲ್ಲಿ ಪಂಜಾಬ್ ಬರೊಬ್ಬರಿ 19 ರನ್ ಪೇರಿಸಿತು.
ಇನ್ನು ಮುಂಬೈ ಪರ ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದರೆ, ಅಶ್ವನಿ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯಾ ಕೂಡ ತಲಾ 1 ವಿಕೆಟ್ ಪಡೆದರು.
ಇದೇ ಜೂನ್ 3 ಮಂಗಳವಾರ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಪಂದ್ಯ ನಡೆಯಲಿದ್ದು, ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಪಂಜಾಬ್ ಕಿಂಗ್ಸ್ ಪ್ರಶಸ್ತಿಗಾಗಿ ಸೆಣಸಲಿದೆ. ಅಂದು ಯಾವುದೇ ತಂಡ ಗೆದ್ದರೂ ಇತಿಹಾಸ ನಿರ್ಮಾಣವಾಗಲಿದ್ದು, ಐಪಿಎಲ್ ಆರಂಭವಾದಾಗಿನಿಂದ ಅಂದರೆ 18 ವರ್ಷಗಳಿಂದ ಆರ್ ಸಿಬಿ ಮತ್ತು ಪಂಜಾಬ್ ಪ್ರಶಸ್ತಿಗೆ ಸೆಣಸುತ್ತಿವೆ.
Advertisement