
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಜುಲೈ 19ರಂದು ಹಾಲಿ ಮುಖ್ಯಸ್ಥ ರೋಜರ್ ಬಿನ್ನಿ ಅವರಗಿ 70 ವರ್ಷ ತುಂಬುತ್ತಿದ್ದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧ್ಯಕ್ಷರಾಗಿ, ರಾಜಕೀಯ ನಾಯಕರಾಗಿ ಮತ್ತು ಪತ್ರಕರ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿರುವ ಶುಕ್ಲಾ ಇದೀಗ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಏರಲಿದ್ದಾರೆ. ರೋಜರ್ ಬಿನ್ನಿ ಅವರು ಭಾರತದ ಮಾಜಿ ಕ್ರಿಕೆಟಿಗರಾಗಿದ್ದು, 1983 ರಲ್ಲಿ ದೇಶದ ಮೊದಲ ಐಸಿಸಿ ವಿಶ್ವಕಪ್ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು.
ಈ ಪರಿವರ್ತನೆಯು ಬಿಸಿಸಿಐನ ವಯೋಮಿತಿ ನಿಯಂತ್ರಣಕ್ಕೆ ಅನುಗುಣವಾಗಿದೆ. 70 ವರ್ಷ ತುಂಬಿದ ನಂತರ ಬಿಸಿಸಿಐನ ಎಲ್ಲ ಪದಾಧಿಕಾರಿಗಳು ತಮ್ಮ ಸ್ಥಾನಗಳನ್ನು ತ್ಯಜಿಸುವುದು ಕಡ್ಡಾಯವಾಗಿದೆ ಎಂದು ಬಿಸಿಸಿಐ ಮೂಲಗಳು ಕ್ರಿಕ್‌ಬ್ಲಾಗರ್‌ಗೆ ತಿಳಿಸಿವೆ.
ಮಂಡಳಿಯ ಹಿರಿಯ ಅಧಿಕಾರಿಗಳಲ್ಲಿ ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು, ದಶಕಗಳಿಂದ ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಕೇಂದ್ರ ವ್ಯಕ್ತಿಯಾಗಿರುವ ಶುಕ್ಲಾ ಅವರನ್ನೇ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ರಾಜೀವ್ ಶುಕ್ಲಾ ಅವರು ಜುಲೈನಲ್ಲಿಯೇ ರೋಜರ್ ಬಿನ್ನಿ ಅವರ ಸ್ಥಾನಕ್ಕೆ ನೇಮಿಸಬಹುದು. ಮಂಡಳಿಯ ಅಧಿಕಾರಿಗಳು ಈಗಾಗಲೇ ಅವರ ಹೆಸರನ್ನೇ ಚರ್ಚಿಸುತ್ತಿದ್ದಾರೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕ್ರಿಕ್‌ಬ್ಲಾಗರ್‌ಗೆ ದೃಢಪಡಿಸಿದ್ದಾರೆ.
ಬಿಸಿಸಿಐ ಸಂವಿಧಾನದ ಪ್ರಕಾರ, ಅಧ್ಯಕ್ಷರು ಸೇರಿದಂತೆ ಯಾವುದೇ ಪದಾಧಿಕಾರಿಗಳು 70 ವರ್ಷ ದಾಟಿದ ನಂತರ ತಮ್ಮ ಹುದ್ದೆಯನ್ನು ತ್ಯಜಿಸಬೇಕು. ಸೌರವ್ ಗಂಗೂಲಿ ಅವರ ಅಧಿಕಾರಾವಧಿ ಮುಗಿದ ನಂತರ ಅಕ್ಟೋಬರ್ 2022ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ರೋಜರ್ ಬಿನ್ನಿ ಜುಲೈ 19ರ ನಂತರ ಅಧ್ಯಕ್ಷರಾಗಿ ಮುಂದುವರಿಯಲು ಅನರ್ಹರಾಗುತ್ತಾರೆ.
ಅಂತಹ ಸಂದರ್ಭಗಳಲ್ಲಿ, ಮಂಡಳಿಯು ಚುನಾವಣೆಗಳನ್ನು ನಡೆಸುವವರೆಗೆ ಹಿರಿಯರಾಗಿರುವ ಉಪಾಧ್ಯಕ್ಷರೇ ಮಧ್ಯಂತರ ಅಧ್ಯಕ್ಷರಾಗಿ ಮಂಡಳಿಯ ಅಧಿಕಾರ ವಹಿಸಿಕೊಳ್ಳುತ್ತಾರೆ. ಡಿಸೆಂಬರ್ 24, 2020 ರಂದು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶುಕ್ಲಾ ಆ ಮಾನದಂಡಗಳಿಗೆ ಸರಿಹೊಂದುತ್ತಾರೆ ಮತ್ತು ಮಂಡಳಿಯ ವಿಷಯಗಳಲ್ಲಿ ಪ್ರಭಾವಶಾಲಿ ಧ್ವನಿಯಾಗಿ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿನ್ನಿಯವರ ಹುಟ್ಟುಹಬ್ಬದಂದು (ಜುಲೈ 19) ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶುಕ್ಲಾ ಈ ಜುಲೈನಲ್ಲಿ ಬಿಸಿಸಿಐ ವ್ಯವಹಾರಗಳ ಚುಕ್ಕಾಣಿ ಹಿಡಿಯಲಿದ್ದಾರೆ.
Advertisement