
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಜೂನ್ 3ರಂದು ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಎದುರು ನೋಡುತ್ತಿದೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸುವುದಕ್ಕೆ ಗೆಲುವಿನಿಂದ ಕೇವಲ ಇನ್ನೊಂದು ಹೆಜ್ಜೆ ದೂರವಿದೆ.
ರಜತ್ ಪಾಟೀದಾರ್ ನೇತೃತ್ವದ ಪಡೆ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಸೋಲಿಸುವ ಮೂಲಕ ಐಪಿಎಲ್ 2025ರ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದೆ. ಈ ಆವೃತ್ತಿಯು ಪಂದ್ಯಾವಳಿಯ ಇತಿಹಾಸದಲ್ಲಿಯೇ ಆರ್‌ಸಿಬಿಯ ಇದುವರೆಗಿನ ಅತ್ಯುತ್ತಮ ಆವೃತ್ತಿಯಾಗಿದ್ದು, ತಂಡವಾಗಿ ಎಲ್ಲ ಆಟಗಾರರು ಕೊಡುಗೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಆರ್‌ಸಿಬಿ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಗ್ರೌಂಡ್ ಬಿನಲ್ಲಿ 3 ಗಂಟೆಗಳ ಅಭ್ಯಾಸ ಅವಧಿಯನ್ನು ನಡೆಸಲಿದೆ. ಗುರುವಾರ ಮುಲ್ಲನ್‌ಪುರದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದ ನಂತರ ತಂಡವು ಅಹಮದಾಬಾದ್‌ಗೆ ಆಗಮಿಸಿದೆ. ಐಪಿಎಲ್ 2025ರ ಫೈನಲ್‌ಗೆ ಮೊದಲು 4 ದಿನಗಳ ವಿರಾಮ ಸಿಕ್ಕಿದ್ದು, ಆರ್‌ಸಿಬಿ ಆಟಗಾರರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ವಾಲಿಫೈಯರ್ 1 ಪಂದ್ಯವನ್ನು ಆಡುವಾಗ ತಂಡಕ್ಕೆ ಕೇವಲ 1 ದಿನವಷ್ಟೇ ವಿರಾಮ ಸಿಕ್ಕಿತ್ತು.
ಐಪಿಎಲ್ 2025ರ ಫೈನಲ್‌ಗೆ ಆರ್‌ಸಿಬಿಯ ಎದುರಾಳಿ ಯಾರಾಗಲಿದ್ದಾರೆ ಎಂಬುದನ್ನು ಭಾನುವಾರ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದ ಮೂಲಕ ನಿರ್ಧರಿಸಲಾಗುತ್ತದೆ. ಕ್ವಾಲಿಫೈಯರ್ 2ನಲ್ಲಿ ಎಲಿಮಿನೇಟರ್‌ನಲ್ಲಿ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ. ಆರ್‌ಸಿಬಿ ತರಬೇತಿ ಪಡೆಯಲಿರುವ ಸ್ಥಳದಲ್ಲಿಯೇ ಪಿಬಿಕೆಎಸ್ ಮತ್ತು ಎಂಐ ತಂಡಗಳು ಮುಖಾಮುಖಿಯಾಗಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಆಡಿರುವ 14 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಒಂಬತ್ತು ಪಂದ್ಯಗಳಲ್ಲಿಯೂ ಒಬ್ಬೊಬ್ಬ ಆಟಗಾರರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿಯೂ ಆರ್‌ಸಿಬಿ ಗೆಲುವು ಸಾಧಿಸಿದ್ದು, ಪ್ರಶಸ್ತಿ ಗೆಲ್ಲಲು ಇನ್ನೊಂದು ಗೆಲುವು ಸಿಗಬೇಕಿದೆ.
Advertisement