IPL 2025: RCB ವೇಗಿ ಜಾಶ್ ಹೇಜಲ್‌ವುಡ್ ಆಡಿದ ಯಾವ ತಂಡವೂ ಫೈನಲ್‌ನಲ್ಲಿ ಸೋತೇ ಇಲ್ಲ!
2025ರ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೇ 29 ರಂದು ಮುಲ್ಲನ್‌ಪುರದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 9 ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಜೂನ್ 3 ರಂದು ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕ್ವಾಲಿಫೈಯರ್ 2ನಲ್ಲಿ ಗೆದ್ದ ತಂಡದೊಂದಿಗೆ ಆರ್‌ಸಿಬಿ ಸೆಣಸಲಿದೆ. ಈ ಬಾರಿ ಆರ್‌ಸಿಬಿ ಕಪ್ ಗೆಲ್ಲೋದು ಪಕ್ಕಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಆರ್‌ಸಿಬಿ ತಂಡದ ವೇಗಿ ಜಾಶ್ ಹೇಜಲ್‌ವುಡ್, ಪ್ಲೇಆಫ್‌ಗೆ ಮುನ್ನ ತಂಡಕ್ಕೆ ಮರಳಿದ್ದಾರೆ. ಹೇಜಲ್‌ವುಡ್ ತಂಡಕ್ಕೆ ಮರಳಿದ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಸೇರಿದಂತೆ ಮೂರು ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಗೆಲುವಿಗೆ ಕಾರಣರಾದರು.
ಆಶ್ಚರ್ಯಕರ ವಿಚಾರವೆಂದರೆ, ಜಾಶ್ ಹೇಜಲ್‌ವುಡ್ ಇದುವರೆಗೂ ಆಡಿರುವ ಯಾವುದೇ ತಂಡಗಳು ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸೋಲು ಕಂಡಿಲ್ಲ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ತಲುಪಿದ್ದು, 18 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವ ವಿಶ್ವಾಸದಲ್ಲಿದೆ.
2012 ರಲ್ಲಿ ಟಿ20 ಚಾಪಿಂಯನ್ಸ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸಸ್, 2015ರಲ್ಲಿ ಆಸ್ಟ್ರೇಲಿಯಾ ತಂಡಕ್ಕಾಗಿ ಕ್ರಿಕೆಟ್ ವಿಶ್ವಕಪ್, 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಐಪಿಎಲ್ ಫೈನಲ್, 2021ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಜಾಶ್ ಹೇಜಲ್‌ವುಡ್ ಆಡಿದ್ದು, ಈ ಎಲ್ಲ ಪಂದ್ಯಗಳಲ್ಲೂ ಅವರು ಆಡಿದ ತಂಡ ಪ್ರಶಸ್ತಿಯನ್ನು ಎತ್ತಿಹಿಡಿದಿದೆ.