
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಎದುರಿಸಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಎಂಟು ವಿಕೆಟ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿತು. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾಲಿಫೈಯರ್ 2ಗೆ ಆಯ್ಕೆಯಾಗಿದೆ. ಕ್ವಾಲಿಫೈಯರ್ 2 ಪಂದ್ಯದಲ್ಲಿ ಗೆಲ್ಲುವ ತಂಡ ಮಂಗಳವಾರ ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೆ, ಪಿಬಿಕೆಎಸ್ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಬಳಿಕ ಪಂಜಾಬ್ ತಂಡವು ಐಪಿಎಲ್ 2025ರ ಫೈನಲ್ ಪ್ರವೇಶಿಸುತ್ತದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಎಂಐ ನಾಲ್ಕನೇ ಸ್ಥಾನದಲ್ಲಿದೆ.
ಅಂಕಪಟ್ಟಿಯಲ್ಲಿ ಮೇಲಿರುವ ಪಿಬಿಕೆಎಸ್ ತಂಡವು ಫೈನಲ್‌ನಲ್ಲಿ ಆರ್‌ಸಿಬಿಯನ್ನು ಎದುರಿಸಲಿದ್ದು, ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಗಾಗಿ ಸೆಣಸಲಿದೆ.
ಪಿಬಿಕೆಎಸ್ ಮತ್ತು ಎಂಐ ನಡುವಿನ ಕ್ವಾಲಿಫೈಯರ್ 2 ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಯೂವೆದರ್ ಪ್ರಕಾರ, ಅಹಮದಾಬಾದ್‌ನಲ್ಲಿ ತಾಪಮಾನವು ಸುಮಾರು 34 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ ಮತ್ತು ಮಳೆಯಾಗುವ ಸಾಧ್ಯತೆ ಇಲ್ಲ.
ಶ್ರೇಯಸ್ ಅಯ್ಯರ್-ರಿಕಿ ಪಾಂಟಿಂಗ್ ಜೋಡಿಗೆ, ಕೊನೆಯ ಪಂದ್ಯದಲ್ಲಿನ ಹೀನಾಯ ಸೋಲಿನಿಂದ ಹೊರಬರಲು ಯತ್ನಿಸಲಿದೆ.
ಆರ್‌ಸಿಬಿ ವಿರುದ್ಧ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಪಿಬಿಕೆಎಸ್ ತಂಡವು ಮಾರ್ಕೊ ಜಾನ್ಸನ್ ಮತ್ತು ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಯುಜ್ವೇಂದ್ರ ಚಾಹಲ್ ಅವರ ಅಲಭ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿತ್ತು.
Advertisement