
ನವದೆಹಲಿ: ರೋಜರ್ ಬಿನ್ನಿ ಅವರಿಗೆ ಮುಂದಿನ ತಿಂಗಳು 70 ವರ್ಷ ತುಂಬಿ ಬಿಸಿಸಿಐ ಅಧ್ಯಕ್ಷ ಸ್ಧಾನದಿಂದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಸಂಸ್ಥೆಯ ಹಿರಿಯ ಆಡಳಿತಾಧಿಕಾರಿ ರಾಜೀವ್ ಶುಕ್ಲಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು ಎಂದು ಬಿಸಿಸಿಐ ಮೂಲಗಳು ಸೋಮವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.
2022 ರಲ್ಲಿ ಸೌರವ್ ಗಂಗೂಲಿ ಅವರ ಸ್ಥಾನಕ್ಕೆ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದ ರೋಜರ್ ಬಿನ್ನಿ ಅವರು ಜುಲೈ 19 ರಂದು 70 ವರ್ಷಗಳನ್ನು ಪೂರೈಸುತ್ತಿದ್ದು, ಬಿಸಿಸಿಐ ಪದಾಧಿಕಾರಿ ಹುದ್ದೆಯ ವಯಸ್ಸಿನ ಮಿತಿಯನ್ನು ಮೀರಿದೆ.
65 ವರ್ಷದ ರಾಜೀವ್ ಶುಕ್ಲಾ ಅವರು 2020ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು, ಮುಂದಿನ ಸೆಪ್ಟೆಂಬರ್‌ನಲ್ಲಿ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಹೊಸ ಚುನಾವಣೆ ನಡೆಯುವವರೆಗೆ ಬಿಸಿಸಿಐ ಹಂಗಾಮಿ ಮುಖ್ಯಸ್ಥರಾಗಿರುತ್ತಾರೆ.
ರಾಜ್ಯಸಭಾ ಸದಸ್ಯ
ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದರಾಗಿರುವ ರಾಜೀವ್ ಶುಕ್ಲಾ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ, ಸಿ ಕೆ ಖನ್ನಾ ಅವರು 2017 ರಿಂದ 2019 ರವರೆಗೆ ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಸಮಿತಿಯ ಅವಧಿಯಲ್ಲಿ 33 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದರು.
ರೋಜರ್ ಬಿನ್ನಿ ಮೂರು ವರ್ಷಗಳ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಉಸ್ತುವಾರಿ ವಹಿಸಿಕೊಳ್ಳುವ ಮೊದಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿದ್ದರು. ಮಾಜಿ ಆಲ್‌ರೌಂಡರ್, ಕಪಿಲ್ ದೇವ್ ನೇತೃತ್ವದಲ್ಲಿ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.
ನಂತರ ಅವರು, 2000 ರ ಐಸಿಸಿ ವಿಶ್ವಕಪ್ ಗೆದ್ದ ಭಾರತದ ಅಂಡರ್-19 ತಂಡಕ್ಕೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು.
Advertisement