
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ RCB ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಐಪಿಎಲ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, 'ಆಟಗಾರರು, ಅಧಿಕಾರಿಗಳಿಗೆ ಕ್ರೀಡಾಂಗಣದ ಹೊರಗಿನ ವಿಚಾರ ತಿಳಿದಿರಲಿಲ್ಲ' ಎಂದು ಹೇಳಿದೆ.
ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಬರೊಬ್ಬರಿ 18 ವರ್ಷಗಳ ಬಳಿಕ ಆರ್ ಸಿಬಿ ಮತ್ತು ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿದಿದ್ದರು.
ಇದೇ ಕಾರಣಕ್ಕೆ ಆರ್ ಸಿಬಿ ಆಟಗಾರರನ್ನು ಕರ್ನಾಟಕ ಸರ್ಕಾರ ಇಂದು ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸಿತ್ತು. ಬಳಿಕ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಿತು. ಈ ಕಾರ್ಯಕ್ರಮಕ್ಕೂ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಕ್ರೀಡಾಂಗಣ ಪ್ರವೇಶಿಸುವಾಗ ಕಾಲ್ತುಳಿತ ಸಂಭವಿಸಿ ಕನಿಷ್ಠ 11 ಮಂದಿ ಸಾವನ್ನಪ್ಪಿ, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದೀಗ ಇದೇ ವಿಚಾರವಾಗಿ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ಒಳಗಿದ್ದ ಅಧಿಕಾರಿಗಳಿಗೆ ಮೈದಾನದ ಹೊರಗೆ ಏನಾಯಿತು ಎಂದು ತಿಳಿದಿರಲಿಲ್ಲ' ಎಂದು ಹೇಳಿದರು.
"ಇದು ತುಂಬಾ ದುಃಖಕರ ವಿಚಾರ ಮತ್ತು ದೊಡ್ಡ ದುರಂತ. ಬೆಂಗಳೂರಿನಲ್ಲಿ ಅಂತಹ ಯಾವುದೇ ವಿಜಯೋತ್ಸವ ಮೆರವಣಿಗೆ ಅಥವಾ ಆಚರಣೆ ನಡೆಯುತ್ತಿರುವ ಬಗ್ಗೆ ನಮಗೆ ತಿಳಿದಿರಲಿಲ್ಲ, ಏಕೆಂದರೆ ಟೂರ್ನಿ ನಿನ್ನೆ ರಾತ್ರಿ ಮುಗಿದಿದೆ... ಅದಾಗಲೇ ವಿಜಯೋತ್ಸವ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದಾರೆಂದು ನನಗೆ ತಿಳಿದಿಲ್ಲ...
ನಾವು ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಅವರಿಗೆ ನಡೆದ ವಿಚಾರ ತಿಳಿಸಿದೆವು ಮತ್ತು ವಾಸ್ತವವಾಗಿ, ಹೊರಗೆ ಏನಾಯಿತು ಎಂದು ಅವರಿಗೆ ತಿಳಿದಿರಲಿಲ್ಲ. ವಿಚಾರ ತಿಳಿದ ಕೂಡಲೇ ಅವರು ಅದನ್ನು ತಕ್ಷಣವೇ ರದ್ದುಗೊಳಿಸುವುದಾಗಿ ನಮಗೆ ಭರವಸೆ ನೀಡಿದರು" ಎಂದು ಅರುಣ್ ಧುಮಾಲ್ ಹೇಳಿದರು.
ಅಲ್ಲದೆ "ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ... ಯಾರಾದರೂ ಈ ಕಾರ್ಯಕ್ರಮವನ್ನು ಯೋಜಿಸಿದ್ದಾರೆಯೇ ಅಥವಾ ಅಭಿಮಾನಿಗಳು ಅಲ್ಲಿಗೆ ಬರುತ್ತಾರೆ ಎಂದು ಭಾವಿಸಿ ಸ್ವತಃ ಬಂದಿದ್ದಾರೆಯೇ ಎಂಬುದು ನಮಗೆ ತಿಳಿದಿಲ್ಲ... ಇದನ್ನು ಪರಿಶೀಲಿಸಲಾಗುವುದು... ಬಿಸಿಸಿಐ ಮಟ್ಟಿಗೆ, ಐಪಿಎಲ್ ಟೂರ್ನಿ ನಿನ್ನೆ ರಾತ್ರಿಯೇ ಕೊನೆಗೊಂಡಿದೆ," ಎಂದು ಅವರು ಸ್ಪಷ್ಟನೆ ನೀಡಿದರು.
Advertisement