
ಐಪಿಎಲ್ 2025ನೇ ಆವೃತ್ತಿ ಅಂತ್ಯಗೊಂಡಿದೆ. ಇದಾದ 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಫ್ರಾಂಚೈಸಿಗಳು ಮುಂದಿನ ಆವೃತ್ತಿಗಾಗಿ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದ್ದು, ಮೆಂಟರ್ ಜಹೀರ್ ಖಾನ್ ಅವರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಹೇಳಲಾಗಿದೆ.
ರಿಷಭ್ ಪಂತ್ ನಾಯಕತ್ವದಲ್ಲಿ LSG 14 ಪಂದ್ಯಗಳಲ್ಲಿ ಕೇವಲ 6 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದ ಮೂಲಕ ಈ ಆವೃತ್ತಿಯಲ್ಲಿ ಅಭಿಯಾನವನ್ನು ಮುಗಿಸಿತು. ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಭವಿಷ್ಯದ ಬಗ್ಗೆಯೂ ಇದೀಗ ಆತಂಕ ಶುರುವಾಗಿದೆ.
ಕ್ರಿಕ್‌ಬಜ್ ಪ್ರಕಾರ, ಜಹೀರ್ ಖಾನ್ ಮತ್ತು ಜಸ್ಟಿನ್ ಲ್ಯಾಂಗರ್ ಇಬ್ಬರೂ ಐಪಿಎಲ್ 2025ನೇ ಆವೃತ್ತಿಗಾಗಿ ಒಂದು ವರ್ಷದ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಆವೃತ್ತಿಯಲ್ಲಿ ಎಲ್‌ಎಸ್‌ಜಿಯ ಕಳಪೆ ಪ್ರದರ್ಶನವು ಇದೀಗ ಸದ್ಯದ ಸಿಬ್ಬಂದಿ ಇರುವಿಕೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಐಪಿಎಲ್ 2025ರ ಮೆಗಾ ಹರಾಜಿಗೂ ಮುಂಚಿತವಾಗಿ ಜಹೀರ್ ಖಾನ್ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಿಕೊಳ್ಳಲಾಗಿತ್ತು.
ಭಾರತದ ಮಾಜಿ ವೇಗಿ ಜಹೀರ್ ಜೊತೆಗೆ ಕೆಲಸ ಮಾಡಲು ಲ್ಯಾಂಗರ್ ಅವರನ್ನು ತಂಡಕ್ಕೆ ಕರೆತರಲಾಯಿತು. ತಂಡದ ಪ್ರದರ್ಶನ ಮತ್ತು ನಿರ್ವಹಣೆಯ ಬಗ್ಗೆ ಇವರಿಬ್ಬರ ವಿರುದ್ಧ ಅಸಮಾಧಾನ ಇದೆ ಎಂದು ವರದಿಯಾಗಿದೆ.
ಎಲ್‌ಎಸ್‌ಜಿ ತಂಡಕ್ಕೆ ಸಂಬಂಧಿಸಿದಂತೆ ಜಹೀರ್ ಖಾನ್ ಅವರ ಮೇಲೆ ಹೆಚ್ಚಿನ ಒತ್ತಡದಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತರಬೇತುದಾರರಾಗಿದ್ದ ಲ್ಯಾಂಗರ್ ಅವರ ಮೇಲೆ ಅಷ್ಟೇನು ಗಮನ ಇರಲಿಲ್ಲ ಎನ್ನಲಾಗಿದೆ. ಈ ಆವೃತ್ತಿಯಲ್ಲಿ LSG ಟಾಪ್ 4 ರಲ್ಲಿ ಸ್ಥಾನ ಪಡೆಯಲು ವಿಫಲವಾದ ಸತತ ಎರಡನೇ ಆವೃತ್ತಿ ಇದಾಗಿದೆ. 2024ರಲ್ಲಿ ಜಹೀರ್ ಖಾನ್ ತಂಡದ ಭಾಗವಾಗಿಲ್ಲದಿದ್ದರೂ, ಈ ಆವೃತ್ತಿಯಲ್ಲಿನ ಕಳಪೆ ಪ್ರದರ್ಶನಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬಹುದು.
ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಫ್ರಾಂಚೈಸಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. 2024ರಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಜೊತೆ ಗೋಯೆಂಕಾ ತೀವ್ರ ಮಾತಿನ ಚಕಮಕಿಯಲ್ಲಿ ತೊಡಗಿದ್ದು ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಾರಿಯೂ ಪ್ರತಿ ಪಂದ್ಯದ ನಂತರವೂ ಅವರು ರಿಷಭ್ ಪಂತ್ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು. ಪಂತ್ ಅವರು ಜಹೀರ್ ಖಾನ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆಂದು ತಿಳಿದುಬಂದಿದೆ.
ಲ್ಯಾಂಗರ್ ಕೂಡ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರನಡೆಯುವ ಸಾಧ್ಯತೆ ಇದೆ. ಈ ಹಿಂದೆ ಆಂಡಿ ಫ್ಲವರ್ ಸತತ ಎರಡು ಆವೃತ್ತಿಗಳಲ್ಲಿ ಎಲ್‌ಎಸ್‌ಜಿಯನ್ನು ಪ್ಲೇಆಫ್‌ಗೆ ಮುನ್ನಡೆಸಿದ್ದರು. ಲೀಗ್‌ನಲ್ಲಿರುವ 10 ತಂಡಗಳಲ್ಲಿ, ಲಕ್ನೋ ಈವರೆಗೂ ಟ್ರೋಫಿಯನ್ನು ಗೆದ್ದೇ ಇಲ್ಲ.
Advertisement