
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದುರಂತ ಘಟನೆಯ ಒಂದು ದಿನದ ನಂತರ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಕಾಣಿಸಿಕೊಂಡ ನಂತರ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಘಟನೆಯ ನಂತರ ವಿರಾಟ್ ಅವರ ನಿರ್ಗಮನವು ಅಸಂವೇದನಾಶೀಲವಾಗಿತ್ತು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಿಡಿಕಾರಿದ್ದು, ಎಕ್ಸ್‌ನಲ್ಲಿ #arrestKohli ಟ್ರೆಂಡ್ ಆಗಿದೆ.
ವಿರಾಟ್ ಕೊಹ್ಲಿ ಗುರುವಾರ ಲಂಡನ್‌ಗೆ ತೆರಳಬೇಕಿದ್ದ ಕಾರಣದಿಂದಲೇ ಬುಧವಾರವೇ ವಿಜಯೋತ್ಸವವನ್ನು ಆಚರಿಸಲಾಗಿದೆ ಎಂದು ಅನೇಕರು ಹೇಳಿದ್ದು, ಮತ್ತಷ್ಟು ಕಿಡಿ ಹೊತ್ತಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದನ್ನು ಹೊರತುಪಡಿಸಿ ಬೇರೇನು ಮಾಡಿಲ್ಲ ಎಂಬುದು ಕ್ರಿಕೆಟಿಗನ ವಿರುದ್ಧ ಆಕ್ರೋಶ ಹೆಚ್ಚಲು ಕಾರಣವಾಗಿದೆ.
'ಘಟನೆ ಬಗ್ಗೆ ಕೇಳಿ ತುಂಬಾ ದುಃಖವಾಯಿತು. ಸಂತ್ರಸ್ತರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇವೆ' ಎಂದು ವಿರಾಟ್ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿಯೂ ಕೊಹ್ಲಿ ಕಡೆಯಿಂದ ಬೇರೆ ಯಾವುದೇ ಪ್ರತಿಕ್ರಿಯೆ ಬಾರದಿರವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
ಈಮಧ್ಯೆ, ಆರ್‌ಸಿಬಿ ಸಂಭ್ರಮಾಚರಣೆಯನ್ನು ಆಯೋಜಿಸುವಲ್ಲಿ ಭಾಗಿಯಾಗಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (ಆರ್‌ಸಿಬಿ) ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಮುಂಬೈಗೆ ತೆರಳಲು ಯತ್ನಿಸುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಕಾರ್ಯಕ್ರಮದ ಆಯೋಜನೆ ಜವಾಬ್ದಾರಿ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ಮೂವರು ಸಿಬ್ಬಂದಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಗುರುವಾರ, ಆರ್‌ಸಿಬಿ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಆರ್ಥಿಕ ನೆರವು ಮತ್ತು ಗಾಯಗೊಂಡ ಅಭಿಮಾನಿಗಳನ್ನು ಬೆಂಬಲಿಸಲು 'ಆರ್‌ಸಿಬಿ ಕೇರ್ಸ್' ನಿಧಿಯನ್ನು ರಚಿಸುವುದಾಗಿ ಘೋಷಿಸಿದೆ.
ಇದರ ಹೊರತಾಗಿಯೂ, ಇಂಟರ್ನೆಟ್ ಬಳಕೆದಾರರು ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರಂತ ನಡೆದಿದ್ದರೂ ಲಂಡನ್‌ಗೆ ಹೊರಟಿದ್ದು ಮತ್ತು ಸಂತ್ರಸ್ತರ ವಿಚಾರದಲ್ಲಿ ಬೇರೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದರ ಕುರಿತು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಫ್ರಾಂಚೈಸಿಯು ಲೀಗ್‌ನಲ್ಲಿ ಗೆಲುವು ಸಾಧಿಸಿದಾಗ ನೀವು ಕಣ್ಣೀರಾಕಿದ್ದೀರಿ. ಆದರೆ, ನಿಮ್ಮ ಸ್ವಾರ್ಥದ ಆಯ್ಕೆಯಿಂದಾಗಿ ಅಭಿಮಾನಿಗಳು ಸತ್ತಾಗ ಆ ಕಣ್ಣೀರು ಎಲ್ಲಿ ಹೋಗಿತ್ತು?. ನಿಮ್ಮ ಮೇಲಿದ್ದ ನಮ್ಮ ಗೌರವವನ್ನು ಕಳೆದುಕೊಂಡಿದ್ದೀರಿ ವಿರಾಟ್ ಕೊಹ್ಲಿ. ನೀವು ಬೇಗ ಲಂಡನ್‌ಗೆ ಹೊರಡಲು ನಿಷ್ಠಾವಂತ ಅಭಿಮಾನಿಗಳ ಜೀವವನ್ನೇ ಬಲಿ ತೆಗೆದುಕೊಂಡಿದ್ದೀರಿ ಮತ್ತು ನೀವು ಕಾಳಜಿ ವಹಿಸುತ್ತಿಲ್ಲ ಎಂದು ಬಳಕೆದಾರರು ಕಿಡಿಕಾರಿದ್ದಾರೆ.
Advertisement