
ಐಪಿಎಲ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಜಗತ್ತಿನ ಎಲ್ಲರನ್ನು ಸೆಳೆದಿದ್ದ 14 ವರ್ಷದ ವೈಭವ್ ಸೂರ್ಯವಂಶಿ, ಆಡಿರುವ ಏಳು ಪಂದ್ಯಗಳಲ್ಲಿ 206.55 ಸ್ಟ್ರೈಕ್ ರೇಟ್‌ನಲ್ಲಿ 252 ರನ್ ಗಳಿಸಿದ್ದಾರೆ. ಐಪಿಎಲ್ 2025ರ ಆವೃತ್ತಿಯಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ದಾಖಲೆ ಮಾಡಿದರು. ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು 14 ವರ್ಷದ ಯುವ ಆಟಗಾರನನ್ನು ಒಂದು ಕೋಟಿ ರೂಪಾಯಿಗೆ ಖರೀದಿಸಿದಾಗ, ಅದು ಭವಿಷ್ಯದ ಹೂಡಿಕೆ ಎಂದೇ ಭಾವಿಸಲಾಗಿತ್ತು. ಆದರೆ, ಗಾಯದಿಂದಾಗಿ ಸಂಜು ಸ್ಯಾಮ್ಸನ್ ಪಂದ್ಯದಿಂದ ಹೊರಗುಳಿದ ಬಳಿಕ ವೈಭವ್ ಅವರು ತಂಡದಲ್ಲಿ ಸ್ಥಾನ ಪಡೆದರು.
ಜೈಪುರದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಶತಕ ಗಳಿಸಿದರು. 35 ಎಸೆತಗಳಲ್ಲಿ ಶತಕ ಬಾರಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದು ಭಾರತೀಯ ಕ್ರಿಕೆಟಿಗನೊಬ್ಬ ಐಪಿಎಲ್‌ನಲ್ಲಿ ಸಿಡಿಸಿದ ವೇಗದ ಶತಕ ಇದಾಗಿದೆ. ಈ ಆವೃತ್ತಿಯಲ್ಲಿ ಆಡಿದ ಮೂರನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಗುಜರಾತ್ ಟೈಟಾನ್ಸ್ ಬೌಲರ್‌ಗಳ ನೀರಿಳಿಸಿದರು.
'ಐಪಿಎಲ್‌ನಲ್ಲಿ ಆಡುವುದು ಎಲ್ಲರಿಗೂ ಕನಸಿನಂತೆ ಮತ್ತು ನನ್ನ ಮೊದಲ ಸೀಸನ್‌ನಿಂದ ನನಗೆ ಬಹಳಷ್ಟು ಸಕಾರಾತ್ಮಕ ಅಂಶಗಳು ಸಿಕ್ಕವು. ಮುಂದಿನ ಸೀಸನ್‌ನಲ್ಲಿ ತಂಡಕ್ಕಾಗಿ ನಾನು ಏನು ಮಾಡಬಹುದು ಎಂಬುದರ ಕುರಿತು ನಾನು ಬಹಳಷ್ಟು ಕಲಿತಿದ್ದೇನೆ' ಎಂದು ಸೂರ್ಯವಂಶಿ ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.
'ಮುಂದಿನ ವರ್ಷ, ನಾನು ಈ ಬಾರಿ ತಪ್ಪುಗಳನ್ನು ಮಾಡಿದ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸ ಮಾಡುತ್ತೇನೆ ಮತ್ತು ತಂಡಕ್ಕಾಗಿ ಹೆಚ್ಚು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇನೆ. ಮುಂದಿನ ವರ್ಷ ನನ್ನ ತಂಡವು ಫೈನಲ್‌ನಲ್ಲಿ ಆಡಬೇಕಾದರೆ, ನಾನು ಈ ಬಾರಿ ಮಾಡಿದ್ದಕ್ಕಿಂತ ಎರಡು ಪಟ್ಟು ಉತ್ತಮವಾಗಿ ಮಾಡಬೇಕು ಮತ್ತು ನನ್ನ ತಂಡಕ್ಕೆ ನಾನು ಎಷ್ಟು ಕೊಡುಗೆ ನೀಡಬಲ್ಲೆ ಎಂಬುದರ ಮೇಲೆ ನಾನು ಗಮನ ಹರಿಸುತ್ತೇನೆ' ಎಂದು ಅವರು ಹೇಳಿದರು.
Advertisement