
ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಟ್ರೋಫಿ ಗೆದ್ದಿದ್ದು, ಈ ಗೆಲುವನ್ನು ವಿಶ್ವದಾದ್ಯಂತ ಅಭಿಮಾನಿಗಳು ಆಚರಿಸಿದ್ದಾರೆ. ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಬೆಂಗಳೂರು ಮೂಲದ ಫ್ರಾಂಚೈಸಿ, ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಆರು ರನ್‌ಗಳಿಂದ ಸೋಲಿಸಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 18 ವರ್ಷಗಳ ಕಾಲ ತಂಡ ಹಾಗೂ ಅಭಿಮಾನಿಗಳ ಕಾಯುವಿಕೆ ಅಂತ್ಯಗೊಂಡಿತು. ಪಿಬಿಕೆಎಸ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದ ಕ್ಷಣದಲ್ಲಿ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾವುಕರಾಗಿ ಮೈದಾನದಲ್ಲಿಯೇ ಕಣ್ಣೀರಾಕಿದರು.
ಆರ್‌ಸಿಬಿಯ ಗೆಲುವು ದೇಶದಾದ್ಯಂತ ಭಾರಿ ಸಂಭ್ರಮಾಚರಣೆಗೆ ಕಾರಣವಾಯಿತು. ಅಂತಹ ಒಂದು ಉದಾಹರಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ ಅವರ ಪೋಸ್ಟರ್‌ಗೆ 'ರಕ್ತ ತಿಲಕ' ಇಟ್ಟಿರುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಆರ್‌ಸಿಬಿ ಅಭಿಮಾನಿಯೊಬ್ಬರು ತಮ್ಮ ಕೈಯನ್ನು ಹರಿತವಾದ ವಸ್ತುವಿನಿಂದ ಗಾಯ ಮಾಡಿಕೊಂಡಿದ್ದು, ಕೈಯಿಂದ ಸುರಿದ ರಕ್ತದಿಂದ ಕೊಹ್ಲಿಯ ಪೋಸ್ಟರ್‌ಗೆ ತಿಲಕ ಇಟ್ಟಿರುವುದು ಕಂಡುಬಂದಿದೆ.
ಅಭಿಮಾನಿಯ ಈ ಹುಚ್ಚು ಕೃತ್ಯಕ್ಕೆ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ವಿಡಿಯೋ X ನಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಬುಧವಾರ ಮುಂಜಾನೆ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡಕ್ಕೆ ಅಭೂತಪೂರ್ವ ಸ್ವಾಗತ ದೊರೆಯಿತು. ಆದರೆ, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಅಭಿಮಾನಿಗಳು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಸಂಭ್ರಮಾಚರಣೆ ವೇಳೆ ಉಂಟಾದ ದುರಂತದಿಂದಾಗಿ, ವಿಜಯೋತ್ಸವ ಆಚರಣೆಗೆ ಮಾರ್ಗಸೂಚಿಗಳನ್ನು ಪರಿಚಯಿಸಲು ಬಿಸಿಸಿಐ ಈಗ ಯೋಚಿಸುತ್ತಿದೆ.
Advertisement