ಸಂಪ್ರದಾಯ ಮುರಿದು ವಿರಾಟ್ ಕೊಹ್ಲಿಗೆ ಅವಕಾಶ ನೀಡಿದ ರಜತ್ ಪಾಟೀದಾರ್; RCB ನಾಯಕನ ನಡೆಗೆ ಅಭಿಮಾನಿಗಳ ಮೆಚ್ಚುಗೆ!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿಯ ಐಪಿಎಲ್ ಪ್ರಶಸ್ತಿ ಆಚರಣೆಯ ಸಂದರ್ಭದ ವಿಡಿಯೋ ಹೊರಬಿದ್ದಿದೆ. ಪಾಟೀದಾರ್ ಅವರ ಈ ನಡೆಯು ಇದೀಗ ಅಭಿಮಾನಿಗಳ ಹೃದಯ ಗೆದ್ದಿದೆ.
ರಜತ್ ಪಾಟೀದಾರ್ - ವಿರಾಟ್ ಕೊಹ್ಲಿ
ರಜತ್ ಪಾಟೀದಾರ್ - ವಿರಾಟ್ ಕೊಹ್ಲಿ
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಧಿಕೃತ ನಾಯಕ ರಜತ್ ಪಾಟೀದಾರ್ ಆಗಿದ್ದರೂ, ಹಲವಾರು ಸಂದರ್ಭಗಳಲ್ಲಿ ವಿರಾಟ್ ಮೈದಾನವನ್ನು ಹೊಂದಿಸುವುದು, ಬೌಲರ್‌ಗಳೊಂದಿಗೆ ಒಳನೋಟಗಳನ್ನು ಹಂಚಿಕೊಳ್ಳುವುದು ಮತ್ತು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಬಗ್ಗೆ ಯೋಜನೆ ರೂಪಿಸುವುದನ್ನು ಕಾಣಬಹುದಾಗಿತ್ತು. ಮೊದಲ ಬಾರಿ ತಂಡದ ನಾಯಕತ್ವ ವಹಿಸಿಕೊಂಡಿದ್ದರೂ, ರಜತ್ ಪಾಟೀದಾರ್ ಸಖತ್ ಕೂಲ್ ಆಗಿ ಕಂಡುಬಂದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ ಆರ್‌ಸಿಬಿ, 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಐಪಿಎಲ್ ಆರಂಭದಿಂದಲೂ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕಾಗಿಯೇ ಆಡಿದ್ದು, ಅವರ ಇತಿಹಾಸ ಮತ್ತು ಫ್ರಾಂಚೈಸಿಗಾಗಿ ನೀಡಿದ ಕೊಡುಗೆ ಅಪಾರ.

ಈಗ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿಯ ಐಪಿಎಲ್ ಪ್ರಶಸ್ತಿ ಆಚರಣೆಯ ಸಂದರ್ಭದ ವಿಡಿಯೋ ಹೊರಬಿದ್ದಿದೆ. ಸಾಮಾನ್ಯವಾಗಿ, ಅಭಿಮಾನಿಗಳಿಗೆ ಸಾಂಪ್ರದಾಯಿಕ ಸನ್ನೆಯಾಗಿ ಕ್ಯಾಮೆರಾಗೆ ಸಹಿ ಹಾಕುವುದು ವಿಜೇತ ನಾಯಕ. ಆದರೆ, ಪಾಟೀದಾರ್ ಈ ಅವಕಾಶವನ್ನು ವಿರಾಟ್ ಅವರಿಗೆ ನೀಡಲು ನಿರ್ಧರಿಸಿದರು. ಪಾಟೀದಾರ್ ಅವರ ಈ ನಡೆಯು ಇದೀಗ ಅಭಿಮಾನಿಗಳ ಹೃದಯ ಗೆದ್ದಿದೆ.

ಆದರೆ, ಆರ್‌ಸಿಬಿಯ ಐಪಿಎಲ್ ಪ್ರಶಸ್ತಿ ಗೆಲುವಿನ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ ಎನ್ನುವುದು ಕ್ರಿಕೆಟ್ ಜಗತ್ತಿಗೆ ತಿಳಿದಿರುವ ವಿಚಾರ. ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ. ನೈಜ ಹೋರಾಟಗಾರ ವೇದಿಕೆಯನ್ನು ಪ್ರತಿನಿಧಿಸುವ ಎಎಂ ವೆಂಕಟೇಶ್ ಎಂಬುವವರು ಕೊಹ್ಲಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದ್ದು, ಆರ್‌ಸಿಬಿ ಫ್ರಾಂಚೈಸಿ, ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಡಿಎನ್‌ಎ ಮತ್ತು ಕೆಎಸ್‌ಸಿಎ ಆಡಳಿತ ಸಮಿತಿಯು ಅಗತ್ಯ ಅನುಮತಿಗಳಿಲ್ಲದೆ ವಿಜಯೋತ್ಸವವನ್ನು ಆಯೋಜಿಸಿವೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com