ಒಂದೇ ಥ್ರೋನಲ್ಲಿ ಎರಡೂ ಬದಿಯ ಬೇಲ್ಸ್ ಎಗರಿಸಿದ Indian Wicket-Keeper; ರನೌಟ್ ಆಗಿದ್ದು ಯಾರು?; Video
ಮುಂಬೈ: ಕ್ರಿಕೆಟ್ ನಲ್ಲಿ ದಿನಕ್ಕೊಂದು ಅಚ್ಚರಿ ಘಟನೆಗಳು ನಡೆಯುತ್ತವೆ ಇದಕ್ಕೊಂದು ತಾಜಾ ಉದಾಹರಣೆ ಸೇರ್ಪಡೆಯಾಗಿದ್ದು, ವಿಕೆಟ್ ಕೀಪರ್ ಎಸೆದ ಥ್ರೋ ಎರಡೂ ಬದಿಯ ಬ್ಯಾಟರ್ ಗಳನ್ನು ದಂಗಾಗಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಹಾಲಿ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL) 2025 ಟೂರ್ನಮೆಂಟ್‌ನಲ್ಲಿ ಈ ಅದ್ಭುತವಾದ ದೃಶ್ಯ ಸೆರೆಯಾಗಿದ್ದು, ರಾಯ್ಗಡ್ ರಾಯಲ್ಸ್ vs ಪುಣೇರಿ ಬಪ್ಪಾ ಪಂದ್ಯದ ಈ ಅದ್ಭುತ ಥ್ರೋ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪುಣೇರಿ ಬಪ್ಪಾ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿ, ರಾಯ್ಘಡ ತಂಡಕ್ಕೆ ಗೆಲ್ಲಲು 203 ರನ್ ಗಳ ಬೃಹತ್ ಗುರಿ ನೀಡಿತು. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಯ್ಗಢ ರಾಯಲ್ಸ್ ತಂಡ ಕೇವಲ 13.1ಓವರ್ ನಲ್ಲೇ 103 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಬರೊಬ್ಬರಿ 99 ರನ್ ಗಳ ಅಂತರದಲ್ಲಿ ಪುಣೇರಿ ಬಪ್ಪಾ ತಂಡ ಭರ್ಜರಿ ಜಯ ದಾಖಲಿಸಿತು.
ರಾಯ್ಗಢ ತಂಡದ ಸೋಲಿಗೆ ಕಾರಣವಾಗಿದ್ದು ಒಂದು ವಿಶಿಷ್ಟ ರನೌಟ್
ಇನ್ನು ಈ ಪಂದ್ಯದಲ್ಲಿ ಪುಣೇರಿ ಬಪ್ಪಾ ತಂಡದ ವಿಕೆಟ್ ಕೀಪರ್ ಸೂರಜ್ ಶಿಂಧೆ ರಾಯ್ಗಡ್ ರಾಯಲ್ಸ್ ಗೆ ಮಾರಕವಾಗಿ ಪರಿಣಮಿಸಿದರು. ಸೂರಜ್ ಶಿಂಧೆ ಎಸೆದ ಒಂದು ರನೌಟ್ ಥ್ರೋ ಕ್ರೀಸ್ ನಲ್ಲಿದ್ದ ಎರಡೂ ಬ್ಯಾಟರ್ ಗಳು ದಂಗಾಗುವಂತೆ ಮಾಡಿತು. ರಾಯ್ಘಡ ರಾಯಲ್ಸ್ ತಂಡದ ಬೌಲರ್ ರಾಮಕೃಷ್ಣ ಘೋಷ್ ಎಸೆದ ಇನ್ನಿಂಗ್ಸ್ ನ ಮೊದಲ ಓವರ್ ನ 5ನೇ ಎಸೆತದಲ್ಲಿ ಬೌಲರ್ ಎಸೆದ ಚೆಂಡನ್ನು ಸ್ಟ್ರೈಕರ್ ಸಿದ್ಧೇಶ್ ವೀರ್ ಚೆಂಡನ್ನು ಆನ್-ಸೈಡ್ ಕಡೆಗೆ ತಳ್ಳಿ, ತ್ವರಿತ ಸಿಂಗಲ್ ಪಡೆಯಲು ಪ್ರಯತ್ನಿಸಿದರು. ಆದರೆ ವಿಕೆಟ್ ಕೀಪರ್ ಸೂರಜ್ ಶಿಂಧೆ ಚೆಂಡನ್ನು ಹಿಡಿತಕ್ಕೆ ಪಡೆದ ನಂತರ ನೇರವಾಗಿ ಚೆಂಡನ್ನು ಸ್ಟಂಪ್ ಮೇಲೆ ಎಸೆದರು.
ಒಂದು ಥ್ರೋ.. ಎರಡೂ ಬದಿಯ ಬೇಲ್ಸ್ ಡೌನ್
ಇನ್ನು Suraj Shinde ಎಸೆದ ಈ ಥ್ರೋ ಎರಡೂ ಬದಿಯ ಬೇಲ್ಸ್ ಗಳನ್ನು ಎಗರಿಸಿತು. ಮೊದಲು ಸ್ಟ್ರೈಕರ್ ಎಂಡ್ ನಲ್ಲಿನ ವಿಕೆಟ್ ಎಗರಿಸಿತು. ಬಳಿಕ ನೇರವಾಗಿ ಚೆಂಡು ನಾನ್ ಸ್ಟ್ರೈಕರ್ ಎಂಡ್ ನತ್ತ ಸಾಗಿ ಅಲ್ಲಿಯೂ ಬೇಲ್ಸ್ ಎಗರಿಸಿತು. ಈ ಘಟನೆ ಕ್ರೀಸ್ ನಲ್ಲಿದ್ದ ಇಬ್ಬರೂ ಬ್ಯಾಟರ್ ಗಳು (ಸಿದ್ದೇಶ್ ವೀರ್ ಮತ್ತು ಹರ್ಷ್ ಮೊಗವೀರ) ದಂಗಾಗುವಂತೆ ಮಾಡಿತು.
ಈ ನಡುವೆ ಪುಣೇರಿ ಬಪ್ಪಾ ತಂಡದ ಆಟಗಾರರು ಎರಡೂ ಬದಿಯ ರನೌಟ್ ಗೆ ಅಂಪೈರ್ ಬಳಿ ಮನವಿ ಮಾಡಿದರು. ಈ ವೇಳೆ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ ಗೆ ನೀಡಿದಾಗ ಇದನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಸಿದ್ದೇಶ್ ವೀರ್ ನಾಟೌಟ್ ಎಂದು ಘೋಷಿಸಿದರು. ಆದರೆ ಅಚ್ಚರಿ ಎಂದರೆ ಮತ್ತೊಂದು ಬದಿಯಲ್ಲಿದ್ದ ಹರ್ಷ್ ಮೊಗವೀರ ಅವರು ಔಟಾಗಿದ್ದರು.
ಕೀಪರ್ Suraj Shinde ಎಸೆದ ಥ್ರೋ ಹರ್ಷ್ ಮೊಗವೀರ ಕ್ರೀಸ್ ಗೆ ಮರಳುವ ಮುನ್ನವೇ ಬೇಲ್ಸ್ ಎಗರಿಸಿತ್ತು. ಹೀಗಾಗಿ ಹರ್ಷ್ ಮೊಗವೀರ ವಿಚಿತ್ರ ರನೌಟ್ ಗೆ ಬಲಿಯಾಗಿ ಪೆವಿಲಿಯನ್ ಸೇರಬೇಕಾಯಿತು.
ವಿಚಿತ್ರ ರನೌಟ್ ಇದೇ ಮೊದಲೇನಲ್ಲ
ಅಂದಹಾಗೆ ಕ್ರಿಕೆಟ್ ನಲ್ಲಿ ಇಂತಹ ವಿಚಿತ್ರ ರನೌಟ್ ಗಳು ಇದೇ ಮೊದಲೇನಲ್ಲ.. 2022 ರಲ್ಲಿ, ವೆಸ್ಟ್ ಇಂಡೀಸ್ ಪವರ್‌ಹೌಸ್ ಆಂಡ್ರೆ ರಸೆಲ್ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸುವಾಗ ನಾನ್-ಸ್ಟ್ರೈಕರ್‌ನ ತುದಿಯಲ್ಲಿ ಇದೇ ರೀತಿ ರನೌಟ್ ಆಗಿದ್ದರು, ಏಕೆಂದರೆ ಶ್ರೀಲಂಕಾದ ತಿಸಾರ ಪೆರೆರಾ ಸ್ಲಿಪ್ ಕಾರ್ಡನ್‌ನಿಂದ ಎಸೆದ ನಂತರ ಚೆಂಡು ಎರಡೂ ತುದಿಗಳಲ್ಲಿ ಸ್ಟಂಪ್‌ಗಳನ್ನು ಎಗರಿಸಿತ್ತು. ಈ ಘಟನೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನಲ್ಲಿ ನಡೆದಿತ್ತು.