RCB ಫ್ರಾಂಚೈಸಿ ಮಾರಾಟ? IPL 2025 Champion ತಂಡದ ಷೇರು ಮಾರಾಟಕ್ಕೆ Diageo ಮುಂದು!

ಆರ್ ಸಿಬಿ ಫ್ರಾಂಚೈಸಿ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್‌ನ ಪೋಷಕ ಸಂಸ್ಥೆ ಡಿಯಾಜಿಯೊ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿರುವ ಪಾಲನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದೆ.
RCB
ಆರ್ ಸಿಬಿ
Updated on

ಬೆಂಗಳೂರು: 18 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿದ್ದು, ಇದರ ಬೆನ್ನಲ್ಲೇ ನಡೆದ ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ದುರಂತ ಇನ್ನೂ ಹಸಿರಾಗಿರುವಂತೆಯೇ ಇದೀಗ ಆರ್ ಸಿಬಿ ಫ್ರಾಂಚೈಸಿಯಿಂದ ಮತ್ತೊಂದು ಮಹತ್ವದ ಸುದ್ದಿ ಹೊರಬಿದ್ದಿದೆ.

ಹೌದು.. ಆರ್ ಸಿಬಿ ಫ್ರಾಂಚೈಸಿ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್‌ನ ಪೋಷಕ ಸಂಸ್ಥೆ ಡಿಯಾಜಿಯೊ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿರುವ ಪಾಲನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದೆ.

ಈ ಬಗ್ಗೆ ಬ್ಲೂಮ್‌ಬರ್ಗ್ ವರದಿ ಮಾಡಿದ್ದು, ಡಿಯಾಜಿಯೊ ಸಂಭಾವ್ಯ ಸಲಹೆಗಾರರೊಂದಿಗೆ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದು, 17,000 ಕೋಟಿ ರೂಪಾಯಿಗಳ ಮೌಲ್ಯಮಾಪನವನ್ನು ಕೋರಬಹುದು ಎನ್ನಲಾಗಿದೆ. ಅಂತೆಯೇ ಈ ಕುರಿತು ಯಾವುದೇ ನಿರ್ಧಾರ ಅಂತಿಮವಾಗಿಲ್ಲ ಮತ್ತು ಅವರು ತಂಡವನ್ನು ಮಾರಾಟ ಮಾಡದೇ ಇರಲೂ ಕೂಡ ನಿರ್ಧರಿಸಬಹುದು ಎಂದೂ ವರದಿ ತಿಳಿಸಿದೆ.

RCB
ಬೆಂಗಳೂರು ಕಾಲ್ತುಳಿತ: ತನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ RCB

ಆರ್ ಸಿಬಿಗೂ ಡಿಯಾಜಿಯೋಗೂ ಏನು ಸಂಬಂಧ?

ಐಪಿಎಲ್‌ ಆರಂಭವಾದಾಗ ಐಪಿಎಲ್‌ ಫ್ರಾಂಚೈಸಿ ಆರ್‌ಸಿಬಿಯನ್ನು ವಿಜಯ್‌ ಮಲ್ಯ ಸ್ವಾಧೀನಪಡಿಸಿಕೊಂಡಿದ್ದರು. ಆದರೆ, ಅವರ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್ ಸಾಲಗಾರರಿಗೆ ಹಣ ಪಾವತಿಸಲು ವಿಫಲವಾದ ನಂತರ 2012ರಲ್ಲಿ ಮುಚ್ಚಲ್ಪಟ್ಟಿತು. ಈ ವೇಳೆ ಯುನೈಟೆಡ್‌ ಸ್ಪಿರಿಟ್ಸ್‌ನಲ್ಲಿ ಕಡಿಮೆ ಪಾಲು ಹೊಂದಿದ್ದ ಡಿಯಾಜಿಯೋ ಇಡೀ ವ್ಯವಹಾರವನ್ನು ಖರೀದಿಸಿದ ಬಳಿಕ ಆರ್‌ಸಿಬಿಯ ಮಾಲೀಕತ್ವ ಕೂಡ ಬ್ರಿಟಿಷ್‌ ಮೂಲದ ಡಿಸ್ಟಿಲ್ಲರಿ ಕಂಪನಿಗೆ ಸೇರಿತ್ತು.

ಷೇರುಗಳ ಮೌಲ್ಯ ಏರಿಕೆ

ಏತನ್ಮಧ್ಯೆ ಅತ್ತ ಆರ್ ಸಿಬಿ ಐಪಿಎಲ್ ಟ್ರೋಫಿ ಗೆಲ್ಲುತ್ತಲೇ ಇತ್ತ ಷೇರುಮಾರುಕಟ್ಟೆಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ. ಜೂನ್ 10 ರಂದು ಬೆಳಿಗ್ಗೆ 10 ಗಂಟೆಗೆ, ಯುನೈಟೆಡ್ ಸ್ಪಿರಿಟ್ಸ್ ಷೇರುಗಳು NSE ನಲ್ಲಿ 2% ರಷ್ಟು ಹೆಚ್ಚಾಗಿ 1,626 ರೂ.ಗಳಲ್ಲಿ ವಹಿವಾಟು ನಡೆಸುತ್ತಿದ್ದವು. 52 ವಾರಗಳ ಕನಿಷ್ಠ 1,237 ರೂ.ಗಳು ಮತ್ತು 52 ವಾರಗಳ ಗರಿಷ್ಠ 1,700 ರೂ ಆಗಿದ್ದವು. ಷೇರುಗಳ ಮಾರುಕಟ್ಟೆ ಬಂಡವಾಳೀಕರಣವು 1.18 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದ್ದವು.

RCB
Bengaluru Stampede: ಹಿಂದುಳಿದ ಮಠಾಧೀಶರಿಂದ RCB, KSCA ವಿರುದ್ಧ EDಗೆ ದೂರು

ಕಳೆದ ತಿಂಗಳು, ಯುನೈಟೆಡ್ ಸ್ಪಿರಿಟ್ಸ್ ತನ್ನ ಪ್ರೀಮಿಯಂ ಆಲ್ಕೋಹಾಲ್ ಬ್ರಾಂಡ್‌ಗಳಿಗೆ ಬಲವಾದ ಬೇಡಿಕೆ ಮತ್ತು ಐದು ವರ್ಷಗಳ ಅಂತರದ ನಂತರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಮಾರಾಟ ಪುನರಾರಂಭದಿಂದಾಗಿ ನಾಲ್ಕನೇ ತ್ರೈಮಾಸಿಕ ಲಾಭದಲ್ಲಿ ಏರಿಕೆಯನ್ನು ವರದಿ ಮಾಡಿತು.

ಡಿಯಾಜಿಯೋದ ಭಾರತೀಯ ಮದ್ಯ ತಯಾರಿಕಾ ಘಟಕವಾಗಿರುವ ಯುನೈಟೆಡ್‌ ಸ್ಪಿರಿಟ್ಸ್‌ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 451 ಕೋಟಿ ರೂ.ಗಳ ಸ್ವತಂತ್ರ ಲಾಭವನ್ನು ವರದಿ ಮಾಡಿದೆ, ಇದು ಕಳೆದ ವರ್ಷಕ್ಕಿಂತ ಶೇ. 17 ರಷ್ಟು ಹೆಚ್ಚಾಗಿದೆ.

ಸಂಸ್ಥೆಯ ಜಾನಿ ವಾಕರ್ ವಿಸ್ಕಿ ಮತ್ತು ಟ್ಯಾಂಕ್ವೆರೆ ಜಿನ್ ಸೇರಿದಂತೆ ಪ್ರೀಮಿಯಂ ವಿಭಾಗದ ನಿವ್ವಳ ಮಾರಾಟ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇ. 13.2 ರಷ್ಟು ಏರಿಕೆಯಾಗಿದೆ ಮತ್ತು ಒಟ್ಟಾರೆ ನಿವ್ವಳ ಮಾರಾಟ ಬೆಳವಣಿಗೆ ಶೇ. 10.5 ರಷ್ಟಿದೆ ಎಂದು ಕಂಪನಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com