
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದು, 56 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲ್ತುಳಿತ ಪ್ರಕರಣ ಸಂಬಂಧ ಈಗಾಗಲೆ ನಾಲ್ವರನ್ನು ಬಂಧಿಸಲಾಗಿದೆ.
ಈ ಮಧ್ಯೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀ ಹಿಂದುಳಿದ ಮಠಾಧೀಶರು, ಆರ್ಸಿಬಿ ಮ್ಯಾನೇಜ್ಮೆಂಟ್ ಮತ್ತು ಕೆಎಸ್ಸಿಎ ವಿರುದ್ಧ ಇಡಿಗೆ ದೂರು ನೀಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧವೂ ದೂರು ನೀಡಿದ್ದಾರೆ.
ಆರ್ಸಿಬಿ ವಾಣಿಜ್ಯೋದ್ಯಮಕ್ಕಾಗಿ ಇದನ್ನು ಬಳಸಿಕೊಂಡಿದೆ. ತಮ್ಮ ಪ್ರತಿಷ್ಠೆಗಾಗಿ ಆರ್ಸಿಬಿ ಕೋಟ್ಯಂತರ ರೂ. ಖರ್ಚು ಮಾಡಿದೆ. ಆರ್ಸಿಬಿ ಹಣಕಾಸು ವ್ಯವಹಾರ ಬಗ್ಗೆ ತನಿಖೆ ನಡೆಸಬೇಕು ಎಂದು ಅತೀ ಹಿಂದುಳಿದ ಮಠಾಧೀಶರ ಮಹಾಸಭಾ(ರಿ) ಮನವಿ ಮಾಡಿದೆ.
ಇನ್ನು, ಕೆಎಸ್ಸಿಎ ತನ್ನ ಸ್ಥಾನ ಮತ್ತು ಪದವಿಗಾಗಿ ಹಣ ನೀಡಿರುವುದು ಗೊತ್ತಾಗಿದೆ. ವಾಣಿಜ್ಯ ಸಂಸ್ಥೆಗಳಿಗೆ ನೀಡಬೇಕಿದ್ದ ಕೋಟಿಗಟ್ಟಲೇ ಹಣ ಬಾಕಿ ಇದೆ. ಕಾರ್ಯಕ್ರಮಕ್ಕೆಂದು ಹಣ ಸಂಗ್ರಹಿಸಿ ಬೇರೆ ಕಡೆ ಬಳಸಿದ್ದಾರೆ. ಸರ್ಕಾರ ಮತ್ತು ಬಿಸಿಸಿಐನಿಂದಲೂ ಹಣ ಪಡೆದು ತಪ್ಪು ಲೆಕ್ಕ ಕೊಟ್ಟಿದ್ದಾರೆ. ಸಾರ್ವಜನಿಕರಿಂದ ಪಡೆದ ಹಣಕ್ಕೆ ಸರಿಯಾದ ಲೆಕ್ಕ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಕೆಎಸ್ಸಿಎ ವಿರುದ್ಧವೂ ತನಿಖೆ ನಡೆಸುವಂತೆ ಮಧಾಧೀಶರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಪೊಲೀಸರಿಗೆ ದೂರು
ಅತೀ ಹಿಂದುಳಿದ ಮಠಾಧೀಶರ ಸಭಾ ಬೆಂಗಳೂರಿನ ಕಬ್ಬನ್ಪಾರ್ಕ್ ಠಾಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಮತ್ತು ಆರ್ಸಿಬಿ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದೆ. ಇವರ ನಿರ್ಲಕ್ಷ್ಯದಿಂದಲೇ ಆರ್ಸಿಬಿಯ 11 ಅಭಿಮಾನಿಗಳ ಸಾವಾಗಿದೆ. ಹೀಗಾಗಿ ನಾಲ್ವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
Advertisement