
ಜೂನ್ 3ರಂದು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಬರೋಬ್ಬರಿ 18 ವರ್ಷಗಳ ಬಳಿಕ ಕಪ್ ಗೆದ್ದಿದ್ದಕ್ಕಾಗಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. RCB ಯ ಮಾಜಿ ಮಾಲೀಕ ಮತ್ತು ಸದ್ಯ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ್ ಮಲ್ಯ ಕೂಡ ತಂಡದ ವಿಜಯವನ್ನು ಆಚರಿಸುವ ವಿಡಿಯೋವನ್ನು Instagram ನಲ್ಲಿ ಹಂಚಿಕೊಂಡಿದ್ದರು. ಆದರೆ, ಕಾಪಿರೈಟ್ ಉಲ್ಲಂಘನೆ ಎಂದು Instagram ಆ ವಿಡಿಯೋವನ್ನು ತೆಗೆದುಹಾಕಿದೆ.
ಈ ಕುರಿತು ಇದೀಗ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಿದ್ಧಾರ್ಥ್, ಕಾಪಿರೈಟ್ ಸಮಸ್ಯೆಯಿಂದಾಗಿ ಇನ್‌ಸ್ಟಾಗ್ರಾಂನಲ್ಲಿ ಏನನ್ನೂ ಪೋಸ್ಟ್ ಮಾಡದಂತೆ ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ತಮ್ಮ ವಿಡಿಯೋವನ್ನು ತೆಗೆದುಹಾಕಲು ಇನ್‌ಸ್ಟಾಗ್ರಾಂಗೆ ಕೇಳಿದ್ದು ಐಪಿಎಲ್ ಅಧಿಕಾರಿಗಳೇ ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.
'ಕೆಲವು ಕಾರಣಗಳಿಗಾಗಿ, ಇನ್‌ಸ್ಟಾಗ್ರಾಂ ನಾನು ಹಂಚಿಕೊಂಡಿದ್ದ ವಿಡಿಯೋವನ್ನು ತೆಗೆದುಹಾಕಲು ನಿರ್ಧರಿಸಿತು ಮತ್ತು ಅಪ್ಲಿಕೇಶನ್ ಅನ್ನು ಬಳಸಲು ಆಗದಂತೆ ನನ್ನನ್ನು ನಿಷೇಧಿಸಲಾಯಿತು' ಎಂದಿದ್ದಾರೆ.
'ನಿಷೇಧವನ್ನು ನಿನ್ನೆ ತೆರವುಗೊಳಿಸಲಾಗಿದೆ. ನಾನು ಇದರ ಆಳಕ್ಕೆ ಹೋಗಿ ನೋಡಿದಾಗ, ನಾನು ಕಾಪಿರೈಟ್ ಉಲ್ಲಂಘಿಸಿದ್ದೇನೆ ಎಂದು ಐಪಿಎಲ್ ದೂರು ನೀಡಿದ್ದರಿಂದ ವಿಡಿಯೋವನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಇದು ಸಂಪೂರ್ಣ ಹುಚ್ಚುತನದ್ದಾಗಿದೆ. ವಿಡಿಯೋ ಒಂದು ನಿಮಿಷಕ್ಕಿಂತ ಕಡಿಮೆ ಇತ್ತು ಮತ್ತು ಅದು ನನ್ನ ಮತ್ತು ನನ್ನ ಭಾವನೆಗಳ ಕುರಿತಾಗಿತ್ತು. ಅಭಿಮಾನಿಗಳೊಂದಿಗೆ ಈ ಸಂಭ್ರಮವನ್ನು ಆಚರಿಸಲು ಮತ್ತು ಮಾತುಕತೆ ನಡೆಸಲು ನನ್ನ ಅವಕಾಶವನ್ನು ಅವರು ಕಸಿದುಕೊಂಡಿದ್ದು ಹುಚ್ಚುತನ. ನಾನು ಅದರ ಬಗ್ಗೆ ಅಸಮಾಧಾನಗೊಂಡಿದ್ದೇನೆ ಮತ್ತು ಐಪಿಎಲ್ ಕಡೆಯಿಂದ ಇದು ದುಃಖಕರವಾಗಿದೆ' ಎಂದು ಹೇಳಿದ್ದಾರೆ.
ಆರ್‌ಸಿಬಿ ತಂಡ ಪ್ರಶಸ್ತಿ ಗೆದ್ದ ನಂತರ, ಸಿದ್ಧಾರ್ಥ್ ಮಲ್ಯ ಅವರು ಟಿವಿ ಮುಂದೆ ನಿಂತು ತಂಡದ ವಿಜಯವನ್ನು ಆಚರಿಸುತ್ತಿರುವ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ 'ಕೃತಿಸ್ವಾಮ್ಯದ ವಿಷಯವನ್ನು' ನೋಡಬಹುದಾದ ಟಿವಿ ಪರದೆಯೂ ಇತ್ತು.
'ಸುದೀರ್ಘ ಹದಿನೆಂಟು ವರ್ಷ, ದೀರ್ಘ ವರ್ಷಗಳು... ನನಗೆ ಏನು ಹೇಳಬೇಕೆಂದು ಸಹ ತಿಳಿದಿಲ್ಲ' ಎಂದು ಈಗ ತೆಗೆದುಹಾಕಲಾದ ವಿಡಿಯೋದಲ್ಲಿ ಅವರು ಕಣ್ಣೀರಾಕುತ್ತಾ ಹೇಳಿದ್ದರು.
Advertisement