
ಲಂಡನ್: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅಂತೆಯೇ ದಿನಕ್ಕೊಂದು ಅಪರೂಪದ ದಾಖಲೆಗಳಿಗೂ ಪಾತ್ರವಾಗುತ್ತಿದೆ.
ಹೌದು.. ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಫೈನಲ್ ಪಂದ್ಯ ನಿರ್ಣಾಯಕ ಘಟ್ಟದತ್ತ ಸಾಗಿದ್ದು ಉಭಯ ತಂಡಗಳ ಪ್ರಬಲ ಬೌಲಿಂಗ್ ಬ್ಯಾಟರ್ ಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಬೌಲರ್ ಗಳು ಮೆರೆದಾಡಿದ್ದು, 14 ವಿಕೆಟ್‌ಗಳು ಉರುಳಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡವು 212 ರನ್ ಗೆ ಆಲೌಟಾಗಿದೆ. ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡವು ನಾಲ್ಕು ವಿಕೆಟ್ ಕಳೆದುಕೊಂಡು 43 ರನ್ ಮಾಡಿದೆ. ಪ್ರೋಟಿಯಸ್ ಪರ ಕಗಿಸೊ ರಬಾಡ ಐದು ವಿಕೆಟ್ ಪಡೆದರೆ, ಮಾರ್ಕೊ ಎನ್ಸೆನ್ ಮೂರು ವಿಕೆಟ್ ಪಡೆದರು.
ಆಸ್ಟ್ರೇಲಿಯಾ 212 ರನ್‌ಗಳಿಗೆ ಆಲೌಟ್ ಆಯಿತು. ಕೊನೆಯ ಸೆಷನ್‌ನಲ್ಲಿ ಆಸ್ಟ್ರೇಲಿಯಾದ ವೇಗಿಗಳು ಕೂಡ ಉತ್ತಮ ಪ್ರದರ್ಶನ ನೀಡಿದರು. ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಒಂದು ವಿಕೆಟ್ ಪಡೆದರು.
145 ವರ್ಷಗಳಲ್ಲಿ ಇದೇ ಮೊದಲು, ಉಭಯ ತಂಡಗಳಿಂದ ವಿಲಕ್ಷಣ ದಾಖಲೆ
ಇನ್ನು ಈ ಪಂದ್ಯದಲ್ಲಿ 145 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳಿಂದ ವಿಲಕ್ಷಣ ದಾಖಲೆಯೊಂದು ಸೃಷ್ಟಿಯಾಗಿದೆ. ಅದರಲ್ಲೂ ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಈ ಐತಿಹಾಸಿಕ ಘಟನೆ ದಾಖಲಾಗಿರುವುದು ವಿಶೇಷ.
ಟೆಸ್ಟ್ ಮಾದರಿಯ ಪಂದ್ಯವನ್ನು ಮೊದಲು ಇಂಗ್ಲೆಂಡ್‌ನಲ್ಲಿ ಆಡಿದಾಗಿನಿಂದ (1880, ಇಂಗ್ಲೆಂಡ್ vs ಆಸ್ಟ್ರೇಲಿಯಾ, ದಿ ಓವಲ್). ಇಂಗ್ಲೆಂಡ್‌ನಲ್ಲಿ ನಡೆದ 561 ಟೆಸ್ಟ್‌ಗಳಲ್ಲಿ ಎರಡೂ ಕಡೆಯ ಅಗ್ರ ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಎರಡೂ ತಂಡಗಳ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 0 ರನ್ ಗಳಿಸಿದ ಮೊದಲ ನಿದರ್ಶನ ಇದಾಗಿದೆ.
ಬುಧವಾರ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಮತ್ತು ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಇಬ್ಬರು ಶೂನ್ಯಕ್ಕೆ ಔಟಾದರು. ಆ ಮೂಲಕ ಉಭಯ ತಂಡಗಳು ಈ ವಿಲಕ್ಷಣ ದಾಖಲೆಗೆ ಪಾತ್ರವಾಗಿದೆ. ಅಂತೆಯೇ ಒಟ್ಟಾರೆಯಾಗಿ, ಟೆಸ್ಟ್ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರುವುದು 10ನೇ ಬಾರಿಯಾಗಿದೆ.
Advertisement