
ಮುಂಬೈ: ಈಗ ರದ್ದಾಗಿರುವ ಕೇರಳದ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಗೆ ರೂ. 538 ಕೋಟಿ ಪಾವತಿಸುವಂತೆ ಬಿಸಿಸಿಐಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿ ಆರ್ . ಚಾಗ್ಲಾ ಅವರಿದ್ದ ಏಕ ಸದಸ್ಯ ಪೀಠ, ಕೇರಳದ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಗೆ ರೂ. 538 ಕೋಟಿ ಪಾವತಿಸುವಂತೆ ಸೂಚಿಸುವ ಮೂಲಕ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.
2010ರ ಐಪಿಎಲ್ ನಲ್ಲಿ ಭಾಗವಹಿಸಿದ್ದ ಕೊಚ್ಚಿ ಟಸ್ಕರ್ಸ್ ತಂಡವನ್ನು ಫ್ರಾಂಚೈಸಿ ಒಪ್ಪಂದ ಉಲ್ಲಂಘನೆ ಆರೋಪದ ಮೇಲೆ ಸೆಪ್ಟೆಂಬರ್ 2011ರಲ್ಲಿ ಬಿಸಿಸಿಐ ವಜಾಗೊಳಿಸಿತ್ತು.
ಈ ತಂಡವನ್ನು ಮೊದಲು RSW ಒಕ್ಕೂಟ ತದನಂತರ ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಕೆಸಿಪಿಎಲ್ ) ನಿರ್ವಹಿಸಿತ್ತು. ಬಿಸಿಸಿಐ ವಿರುದ್ಧ 2012ರಲ್ಲಿ ಕೆಸಿಪಿಎಲ್ ಮತ್ತು RSW ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದವು.
2015ರಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯ, ಕೆಸಿಪಿಎಲ್ ಗೆ ರೂ. 384.8 ಕೋಟಿ ಹಾಗೂ RSWಗೆ ಬಡ್ತಿ ಸಮೇತ ರೂ. 153.3 ಕೋಟಿ ಮರಳಿಸುವಂತೆ ಆದೇಶಿಸಿತ್ತು.
Advertisement