
ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ತಮ್ಮ ವಿವಾದಾತ್ಮಕ ಸೆಲೆಬ್ರೇಷನ್ ನಿಂದಲೇ ಹೆಚ್ಚು ಸುದ್ದಿಗೆ ಗ್ರಾಸವಾಗುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ದಿಗ್ವೇಶ್ ರಾಠಿ ಐಪಿಎಲ್ ಮುಕ್ತಾಯದ ಬಳಿಕವೂ ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.
ಹೌದು.. ಐಪಿಎಲ್ 2025ರ ಚುಟುಕು ಕ್ರಿಕೆಟ್ ಟೂರ್ನಿ ಮುಕ್ತಾಯವಾಗಿದ್ದು, 18 ವರ್ಷಗಳ ಬಳಿರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಮುತ್ತಿಟ್ಟಿದೆ. ಇದಾದ ಬಳಿಕ ಸಾಕಷ್ಟು ಘಟನೆಗಳು ನಡೆದು ಐಪಿಎಲ್ ಸುದ್ದಿ ತಣ್ಣಗಾಗಿತ್ತು.
ಆದರೆ ಇದೀಗ ಮತ್ತೆ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ದಿಗ್ವೇಶ್ ರಾಠಿ ಮೂಲಕ ಮತ್ತೆ ಐಪಿಎಲ್ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮತ್ತೆ ಸುದ್ದಿ ಮಾಡುತ್ತಿದ್ದಾರೆ ದಿಗ್ವೇಶ್ ರಾಠಿ
ಇನ್ನು ಐಪಿಎಲ್ 2025 ಟೂರ್ನಿಯಲ್ಲಿ ತಮ್ಮ ವಿವಾದಾತ್ಮಕ 'ಟಿಕ್ ದಿ ನೋಟ್‌ಬುಕ್' ಸಂಭ್ರಮಾಚರಣೆಯಿಂದಲೇ ಸುದ್ದಿಗೆ ಗ್ರಾಸವಾಗುತ್ತಿದ್ದ ದಿಗ್ವೇಶ್ ರಾಠಿ ಇದೇ ವಿವಾದದಿಂದ ದಂಡನೆಗೂ ತುತ್ತಾಗಿದ್ದರು. 2 ಪಂದ್ಯದಗಳಲ್ಲಿ ದಂಡ ಹಾಕಿಸಿಕೊಂಡಿದ್ದ ದಿಗ್ವೇಶ್ ಒಂದು ಪಂದ್ಯದ ನಿಷೇಧ ಕೂಡ ಎದುರಿಸಿದ್ದರು.
ಇದೀಗ ಮತ್ತೆ ಮಿಸ್ಟರಿ ಸ್ಪಿನ್ನರ್ ದಿಗ್ವೇಶ್ ರಾಠಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಯಾವುದೇ ರೀತಿಯ ವಿವಾದದಿಂದಲ್ಲ.. ಬದಲಿಗೆ ತಮ್ಮ ಅಪರೂಪದ ಬೌಲಿಂಗ್ ಪ್ರದರ್ಶನದ ಮೂಲಕ ದಿಗ್ವೇಶ್ ಸುದ್ದಿಗೆ ಗ್ರಾಸವಾಗಿದ್ದಾರೆ.
5 ಎಸೆತಗಳಲ್ಲಿ 5 ವಿಕೆಟ್, Video Viral
ಇನ್ನು ಇತ್ತೀಚೆಗೆ ದಿಗ್ವೇಶ್ ರಾಠಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಆ ವಿಡಿಯೋದಲ್ಲಿ ದಿಗ್ವೇಶ್ ರಾಠಿ 5 ಎಸೆತಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಲೋಕಲ್ ಟೂರ್ನಿಯೊಂದರಲ್ಲಿ ದಿಗ್ವೇಶ್ ರಾಠಿ ಈ ಸಾಧನೆ ಮಾಡಿದ್ದು, ಒಂದೇ ಓವರ್ ನಲ್ಲಿ ಐದು ಬ್ಯಾಟರ್ ಗಳನ್ನು ಔಟ್ ಮಾಡಿದ್ದಾರೆ. ದಿಗ್ವೇಶ್ ಎಸೆದ ಆ ಓವರ್ ನಲ್ಲಿ 4 ಬ್ಯಾಟರ್ ಗಳು ಕ್ಲೀನ್ ಬೌಲ್ಡ್ ಆದರೆ ಓರ್ವ ಬ್ಯಾಟರ್ ಎಲ್ ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದಾರೆ. ಒಟ್ಟಾರೆಯಾಗಿ ಪಂದ್ಯದಲ್ಲಿ ಏಳು ವಿಕೆಟ್‌ಗಳ ಸಾಧನೆ ಮಾಡಿದ್ದರು.
ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಇದು ಯಾವ ಪಂದ್ಯ ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
LSG ಮಾಲೀಕ Sanjiv Goenka ಹೇಳಿದ್ದೇನು?
ಇನ್ನು ಈ ವಿಡಿಯೋವನ್ನು ಸ್ವತಃ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಐದು ವಿಕೆಟ್ ಗಳಿಸಿರುವ ದಿಗ್ವೇಶ್ ಸಾಧನೆಯನ್ನು ಗೋಯೆಂಕಾ ಕೊಂಡಾಡಿದ್ದಾರೆ. ಸ್ಥಳೀಯ ಟಿ20 ಟೂರ್ನಿಯೊಂದರಲ್ಲಿ ದಿಗ್ವೇಶ್ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ ಗಳಿಸಿದ್ದಾರೆ ಎಂದು ಗೋಯೆಂಕಾ ಉಲ್ಲೇಖಿಸಿದ್ದಾರೆ.
'ಸ್ಥಳೀಯ ಟಿ20 ಪಂದ್ಯದಲ್ಲಿ ದಿಗ್ವೇಶ್ ರಾಠಿ 5 ಎಸೆತಗಳಲ್ಲಿ 5 ವಿಕೆಟ್ ಪಡೆದಿರುವ ಈ ಕ್ಲಿಪ್ ಅನ್ನು ಆಕಸ್ಮಿಕವಾಗಿ ನೋಡಿದೆ. ಐಪಿಎಲ್ 2025 ರಲ್ಲಿ ಎಲ್‌ಎಸ್‌ಜಿ ಪರ ಸ್ಟಾರ್ ಆದ ಅದ್ಭುತ ಪ್ರತಿಭೆಯ ಒಂದು ನೋಟ" ಎಂದು ಗೋಯೆಂಕಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಪಿಎಲ್ ನಲ್ಲಿ ದಿಗ್ವೇಶ್ ಸಾಧನೆ
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 18ನೇ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ₹30 ಲಕ್ಷ ನೀಡಿ ದಿಗ್ವೇಶ್ ಅವರನ್ನು ಲಖನೌ ಫ್ರಾಂಚೈಸಿ ಖರೀದಿಸಿತ್ತು. ಮೊದಲ ಆವೃತ್ತಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದ ದಿಗ್ವೇಶ್ 13 ಪಂದ್ಯಗಳಲ್ಲಿ ಒಟ್ಟು 14 ವಿಕೆಟ್ ಗಳಿಸಿದ್ದರು. ಆದರೆ ವಿಕೆಟ್ ಪಡೆದಾಗ ನೋಟ್‌ಬುಕ್ ಸಂಭ್ರಮದಿಂದಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಹಲವು ಬಾರಿ ದಂಡನೆಗೆ ಒಳಗಾಗಿದ್ದರು.
Advertisement