
ಕಳೆದ ಕೆಲವು ವರ್ಷಗಳಲ್ಲಿ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ರೆಡ್ ಬಾಲ್ ಮತ್ತು ವೈಟ್ ಬಾಲ್ ಕ್ರಿಕೆಟ್ ಎರಡರಲ್ಲೂ ಕೆಲವು ಅತ್ಯುತ್ತಮ ಬೌಲಿಂಗ್ ಸ್ಪೆಲ್‌ಗಳನ್ನು ನೀಡಿದ್ದಾರೆ. ಆದಾಗ್ಯೂ, ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಶಮಿಯನ್ನು ಕೆರಳಿಸುವುದರಿಂದ ಅದು ಉತ್ತಮ ಪ್ರದರ್ಶನಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ವೇಳೆ ಹೋಗಿ ಬಿರಿಯಾನಿ ತಿನ್ನು ಎಂದು ಶಮಿಯನ್ನು ಕೆಣಕಿದ್ದ ಘಟನೆಯನ್ನು ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ. ಆಗ ಶಮಿ ಐದು ವಿಕೆಟ್‌ಗಳನ್ನು ಪಡೆದು ಭಾರತವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.
ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳನ್ನು ಇಟ್ಟುಕೊಂಡಿರುವಾಗ 100 ರನ್‌ಗಳಿಗಿಂತ ಕಡಿಮೆ ಅವಶ್ಯಕತೆಯಿತ್ತು. ಭಾರತ ಸರಣಿಯನ್ನು ವೈಟ್‌ವಾಶ್ ಮಾಡುವ ಅಂಚಿನಲ್ಲಿತ್ತು. ಆಗ, ಕೊನೆಯ ದಿನದ ಊಟದ ಸಮಯದಲ್ಲಿ ಮುಖ್ಯ ಕೋಚ್ ಶಾಸ್ತ್ರಿ ಮತ್ತು ಶಮಿ ನಡುವಿನ ಮಾತುಕತೆಯು ವೇಗಿಯನ್ನು ಕೆರಳಿಸಿತು.
ಶಮಿ ದೊಡ್ಡ ತಟ್ಟೆಯಲ್ಲಿ ಬಿರಿಯಾನಿ ಹಿಡಿದಿರುವುದನ್ನು ಶಾಸ್ತ್ರಿ ಗಮನಿಸಿದರು ಮತ್ತು ಅದರ ಬಗ್ಗೆ ವೇಗಿಯನ್ನು ಕೀಟಲೆ ಮಾಡಲು ಮುಂದಾದರು.
'ಆ ಪಂದ್ಯದಲ್ಲಿ ಸಾಕಷ್ಟು ಬಿಸಿಲು ಇತ್ತು. ಊಟದ ಸಮಯದಲ್ಲಿ, ನಾನು ನಡೆದುಕೊಂಡು ಹೋಗುತ್ತಿದ್ದಾಗ, ಶಮಿಯ ತಟ್ಟೆಯನ್ನು ನೋಡಿದೆ. ಅವರು ಬಿರಿಯಾನಿ ಸವಿಯುತ್ತಿದ್ದರು' ಎಂದು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವಿವರಿಸಿದ್ದಾರೆ.
'ತೇರಾ ಭೂಕ್ ಇದರ್ ಥೀಕ್ ಹೋ ಗಯಾ ಕ್ಯಾ? (ನಿನ್ನ ಹಸಿವು ಈಗಾಗಲೇ ನೀಗಿದೆಯೇ?)' ಎಂದು ಶಾಸ್ತ್ರಿ ಶಮಿಯನ್ನು ಕೆಣಕುತ್ತಾ ಹೇಳಿದರು ಎಂದು ಭಾರತದ ಆಗಿನ ಬೌಲಿಂಗ್ ಕೋಚ್ ಭರತ್ ಅರುಣ್ ವಿವರಿಸಿದ್ದಾರೆ.
ಆಗ ಶಮಿ ಶಾಸ್ತ್ರಿಗೆ ಕೋಪದಿಂದ ಪ್ರತಿಕ್ರಿಯಿಸಿದರು ಮತ್ತು ಬಿರಿಯಾನಿ ತಿನ್ನಲು ನಿರಾಕರಿಸಿದರು.
'ಲೇ ಲೇ ಪ್ಲೇಟ್. ನಹಿ ಚಾಹಿಯೇ ಬಿರಿಯಾನಿ (ಈ ತಟ್ಟೆಯನ್ನು ತೆಗೆದುಕೊಳ್ಳಿ. ನನಗೆ ಬಿರಿಯಾನಿ ಅಗತ್ಯವಿಲ್ಲ). ಈ ಬಿರಿಯಾನಿ ಗೋ ಟು ಹೆಲ್' ಎಂದು ಶಮಿ ಉತ್ತರಿಸಿದರು.
ನಂತರ ಶಾಸ್ತ್ರಿ ಅವರು ಅರುಣ್ ಬಳಿಗೆ ಬಂದು ಶಮಿ ಕೋಪಗೊಳ್ಳಲು ಬಿಡುವಂತೆ ಕೇಳಿಕೊಂಡರು.
'ಅವರು ಕೋಪಗೊಂಡಿದ್ದಾರೆ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ನಿಮ್ಮೊಂದಿಗೆ ಮಾತನಾಡಲು ಬಯಸಿದರೆ, ಮೊದಲು ಕೆಲವು ವಿಕೆಟ್‌ಗಳನ್ನು ಪಡೆದ ನಂತರವೇ ಮಾತನಾಡಲು ಅವರಿಗೆ ಹೇಳಿ' ಎಂದು ಶಾಸ್ತ್ರಿ ಅರುಣ್‌ಗೆ ಸೂಚನೆ ನೀಡಿದರು.
ಶಮಿ ತನ್ನ ಕೋಪವನ್ನು ಬೌಲಿಂಗ್ ಮೂಲಕ ಹೊರಹಾಕಿದರು. ನಂತರದ ಅವಧಿಯಲ್ಲಿ ಭಾರತವು ದಕ್ಷಿಣ ಆಫ್ರಿಕಾಗೆ 33 ರನ್‌ಗಳ ಅಂತರದಲ್ಲಿ ಕೊನೆಯ ಏಳು ವಿಕೆಟ್‌ಗಳನ್ನು ಕಬಳಿಸಿತು. ಭಾರತವು ಪಂದ್ಯವನ್ನು 63 ರನ್‌ಗಳಿಂದ ಗೆದ್ದಿತು. ಶಮಿ ಕೊನೆಯ ಐದು ವಿಕೆಟ್‌ಗಳಲ್ಲಿ ನಾಲ್ಕನ್ನು ಕಬಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು.
'ಕೋಪಗೊಳ್ಳುವುದು ಒಂದು ವಿಷಯ. ಆದರೆ, ಆ ಕೋಪವನ್ನು ನಿಮ್ಮ ಬೌಲಿಂಗ್‌ನಲ್ಲಿ ಸೇರಿಸುವುದು ಇನ್ನೊಂದು ವಿಷಯ' ಎಂದು ಅರುಣ್ ವಿವರಿಸಿದರು.
ಶಮಿ 12.3 ಓವರ್‌ಗಳಲ್ಲಿ 5/28 ರೊಂದಿಗೆ ಆಟ ಮುಗಿಸಿದರು ಮತ್ತು ಅವರ ಪ್ರಯತ್ನದಿಂದಾಗಿ ಭಾರತವನ್ನು 0-3 ಸರಣಿಯ ವೈಟ್‌ವಾಶ್‌ನ ಅವಮಾನದಿಂದ ಪಾರು ಮಾಡಿತು.
ಪಂದ್ಯದ ನಂತರ ಭರತ್ ಅರುಣ್ ಶಮಿಗೆಬಿರಿಯಾನಿ ನೀಡಲು ಮುಂದಾದರು. ಅದಕ್ಕೆ ಶಮಿ 'ಮೊದಲು ನೀವು ನನಗೆ ಕೋಪ ಬರುವಂತೆ ಮಾಡುತ್ತೀರಿ. ಆದರೆ, ನಂತರ ಅದು ಸರಿಯಾಗಿಯೇ ಕೆಲಸ ಮಾಡುತ್ತದೆ' ಎಂದು ಉತ್ತರಿಸಿದರು.
Advertisement