
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ (Sanjay Manjrekar) ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಪರೋಕ್ಷವಾಗಿ ವಿರಾಟ್ ಕೊಹ್ಲಿ ಅವರನ್ನು ಟೀಕಿಸಿ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಕೆಮೆಂಟರಿ ವೇಳೆ ಸಂಜಯ್ ಮಂಜ್ರೇಕರ್ ಭಾರತದ ಶುಭ್ ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ವೈಖರಿಯನ್ನು ಹೊಗಳುವ ಭರದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಈ ಜೋಡಿ ಹೆಚ್ಚು ಒತ್ತಡಕ್ಕೆ ಒಳಗಾಗದೇ ಬ್ಯಾಟ್ ಬೀಸಿ ತಂಡದ ಮೇಲುಗೈನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಇದೇ ವಿಚಾರವಾಗಿ ಸಂಜಯ್ ಮಂಜ್ರೇಕರ್ ತಮ್ಮ ಕಮೆಂಟರಿಯಲ್ಲಿ ಮಾತನಾಡಿದ್ದು, ಆಫ್-ಸ್ಟಂಪ್ ಹೊರಗೆ ಎಸೆದ ಚೆಂಡುಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಅವುಗಳನ್ನು ಬಿಟ್ಟು ಬಿಡುವ ರಾಹುಲ್ ಮತ್ತು ಜೈಸ್ವಾಲ್ ಅವರ ಸಾಮರ್ಥ್ಯವನ್ನು ಹೊಗಳಿದರು.
ಆದಾಗ್ಯೂ, ಹಾಗೆ ಮಾಡುವುದರ ಮೂಲಕ, ಇಂಗ್ಲೆಂಡ್ ಸರಣಿಗೆ ತಂಡ ಘೋಷಣೆಯಾಗುವ ಕೆಲವೇ ದಿನಗಳ ಮೊದಲು, ಮೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಅವರು ಟೀಕಿಸಿದರು.
ಮಂಜ್ರೇಕರ್ ಹೇಳಿದ್ದೇನು?
ಮಾಜಿ ಕ್ರಿಕೆಟಿಗರೊಬ್ಬರು ಆಫ್ ಸ್ಟಂಪ್ ಆಚೆ ಹೋಗುತ್ತಿದ್ದ ಬಾಲ್ ಗಳನ್ನು ಅನಗತ್ಯವಾಗಿ ಕೆಣಕಿ ಪದೇ ಪದೇ ಔಟಾಗುತ್ತಿದ್ದರು. ಅಂತಹ ಘಟನೆ ಇಲ್ಲಿ ಸಂಭವಿಸುತ್ತಿಲ್ಲ ಎಂದು ಮಂಜ್ರೇಕರ್ ಹೇಳಿದ್ದರು. ಅವರ ಈ ಮಾತು ವಿರಾಟ್ ಕೊಹ್ಲಿ ಅವರನ್ನೇ ಗುರಿಯಾಗಿಕೊಂಡು ಹೇಳಿದ್ದಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಕೊಹ್ಲಿ ಪದೇ ಪದೇ ಒಂದೇ ರೀತಿಯ ಔಟ್
ಇನ್ನು ಈ ಹಿಂದೆ ಭಾರತದ ಪರ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಎಂಟು ಸಂದರ್ಭಗಳಲ್ಲಿ ಒಂದೇ ರೀತಿಯಲ್ಲಿ ಔಟಾಗಿದ್ದರು. ಕೊಹ್ಲಿ ನಾಲ್ಕನೇ ಮತ್ತು ಐದನೇ ಸ್ಟಂಪ್ ಲೈನ್‌ಗಳಲ್ಲಿ ಬರುತ್ತಿದ್ದ ಎಸೆತಗಳನ್ನು ಅನಗತ್ಯವಾಗಿ ಕೆಣಕಿ ಔಟಾಗುತ್ತಿದ್ದರು. ಒಂದು ಹಂತದಲ್ಲಿ ಇದು ಅವರ ದೌರ್ಬಲ್ಯವಾಗಿಯೂ ಮಾರ್ಪಟ್ಟಿತ್ತು. ಈ ದೌರ್ಬಲ್ಯ ಕೊಹ್ಲಿ ಅವರ ವೃತ್ತಿಜೀವನದುದ್ದಕ್ಕೂ ನಿಜವಾಗಿಯೂ ತೊಂದರೆ ನೀಡಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಕಾಟ್ ಬೋಲ್ಯಾಂಡ್‌ರಂತಹ ಆಟಗಾರರು ಇದನ್ನು ನಿಜವಾಗಿಯೂ ಸಮರ್ಥವಾಗಿ ಬಳಸಿಕೊಂಡರು.
Advertisement