
ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದ್ದು, ಭಾರತದ ಪರ ಇಬ್ಬರು ಬ್ಯಾಟರ್ ಗಳು ಶತಕ ಸಿಡಿಸಿದರೆ, ಓರ್ವ ಬ್ಯಾಟರ್ ಅರ್ಧಶತಕ ಸಿಡಿಸಿದ್ದಾರೆ.
ಈ ನಡುವೆ ದಿನದಾಟ ಮುಕ್ತಾಯದ ಬಳಿಕ ಡ್ರೆಸಿಂಗ್ ರೂಂ ಗೆ ಬಂದ ರಿಷಬ್ ಪಂತ್ ರನ್ನು ತಂಡದ ಮತ್ತೋರ್ವ ಆಟಗಾರ ಕೆಎಲ್ ರಾಹುಲ್ ಕೈಮುಗಿದು ಸ್ವಾಗತಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ. ಭಾರತದ ಪರ ಯಶಸ್ವಿ ಜೈಸಾಲ್ ಮತ್ತು ನಾಯಕ ಶುಭ್ ಮನ್ ಗಿಲ್ ಶತಕ ಸಿಡಿಸಿದರೆ, ರಿಷಬ್ ಪಂತ್ ಅಜೇಯ 65 ರನ್ ಗಳಿಸಿ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತ ಭರ್ಜರಿ ಆರಂಭ
ಇನ್ನು ಈ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಆರಂಭ ಪಡೆಯಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಕೆಲ್ ರಾಹುಲ್ ಉತ್ತಮ ಆರಂಭ ಒದಗಿಸಿದರು. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 91 ರನ್ ಗಳ ಅಮೋಘ ಜೊತೆಯಾಟವಾಡಿತು. ಈ ಹಂತದಲ್ಲಿ 42 ರನ್ ಗಳಿಸಿದ್ದ ರಾಹುಲ್ ಬ್ರೈಡನ್ ಕಾರ್ಸೆ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಸಾಯಿ ಸುದರ್ಶನ್ ಡಕೌಟ್ ಆಗಿ ಪದಾರ್ಪಣೆ ಪಂದ್ಯದಲ್ಲೇ ಶೂನ್ಯ ಸಾಧನೆ ಮಾಡಿದರು.
ಸಾಯಿ ಸುದರ್ಶನ್ ಔಟಾದರೂ ನಾಯಕ ಶುಭ್ ಮನ್ ಗಿಲ್ ಜೊತೆಗೂಡಿದ ಜೈಸ್ವಾಲ್ ತಮ್ಮ ಸಾಮಾನ್ಯ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದರು. ಜೈಸ್ವಾಲ್ ಗೆ ಉತ್ತಮ ಸಾಥ್ ನೀಡಿದ ಗಿಲ್ ಕೂಡ ಅರ್ಧಶತಕ ಸಿಡಿಸಿದರು. ಈ ಹಂತದಲ್ಲಿ ಜೈಸ್ವಾಲ್ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಅವರ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 5ನೇ ಶತಕವಾಗಿದೆ. ಬಳಿಕ 101 ರನ್ ಗಳಿಸಿದ್ದ ಜೈಸ್ವಾಲ್ ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಔಟಾದರು.
ಮೈದಾನದಲ್ಲಿ ಪಂತ್-ಗಿಲ್ ಆರ್ಭಟ
ಇನ್ನು ಅತ್ತ ಜೈಸ್ವಾಲ್ ಔಟಾಗುತ್ತಿದ್ದಂತೆಯೇ ಕ್ರೀಸ್ ಗೆ ಆಗಮಿಸಿದ ರಿಷಬ್ ಪಂತ್ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಒಂದೆಡೆ ಗಿಲ್ ಉತ್ತಮ ಶಾಟ್ ಗಳ ಮೂಲಕ ತಮ್ಮ ರನ್ ವೇಗ ಹೆಚ್ಚಿಸಿಕೊಂಡರೆ ಇತ್ತ ಪಂತ್ ಕೂಡ ಎಂದಿನಂತೆ ವೇಗವಾಗಿ ರನ್ ಗಳಿಸುವ ಮೂಲಕ ಭಾರತ ತಂಡದ ಮೊತ್ತ ಹೆಚ್ಚಿಸಿದರು. ಪಂತ್ 102 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ ಅಜೇಯ 65 ರನ್ ಕಲೆಹಾಕಿದ್ದಾರೆ. ಅಂತೆಯೇ ಮತ್ತೊಂದು ತುದಿಯಲ್ಲಿರುವ ಶುಭ್ ಮನ್ ಗಿಲ್ ಕೂಡ 175 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 16 ಬೌಂಡರಿಗಳ ನೆರವಿನಿಂದ ಅಜೇಯ 127 ರನ್ ಕಲೆಹಾಕಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಪೆವಿಲಿಯನ್ ನಲ್ಲಿ ಕೈ ಮುಗಿದು ನಿಂತ KL Rahul
ಇನ್ನು ಮೊದಲ ದಿನದಾಟದ ಮುಕ್ತಾಯದ ಬಳಿಕ ಉಭಯ ಆಟಗಾರರು ಡ್ರೆಸಿಂಗ್ ರೂಂಗೆ ಬಂದರು. ಈ ವೇಳೆ ಅಲ್ಲಿಯೇ ಇದ್ದ ಕೆಎಲ್ ರಾಹುಲ್ ರಿಷಬ್ ಪಂತ್ ಬರುತ್ತಲೇ ಕೈ ಮುಗಿದು ಸ್ವಾಗತಿಸಿದರು. ಪಂತ್ ಮತ್ತು ಗಿಲ್ ಭರ್ಜರಿ ಜೊತೆಯಾಟಕ್ಕೆ ಡ್ರೆಸಿಂಗ್ ರೂಮಿನಲ್ಲಿದ್ದ ಎಲ್ಲ ಆಟಗಾರರು ಮತ್ತು ಸಿಬ್ಬಂದಿ ಎದ್ದು ನಿಂತು ಚಪ್ಪಾಳೆ ತಟ್ಟಿದರು. ರಾಹುಲ್ ಕೈ ಮುಗಿದು ಸ್ವಾಗತಿಸುವ ಮೂಲಕ ಪಂತ್ ರ ಸಾಹಸಮಯ ಬ್ಯಾಟಿಂಗ್ ನಾಕ್ ಅನ್ನು ಶ್ಲಾಘಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement