
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಮಿಂಚಿದ್ದಾರೆ. ಬುಮ್ರಾ ಸಂಪೂರ್ಣವಾಗಿ ಬೇರೆ ಮೇಲ್ಮೈಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆಯೇ? ಅವರ ಮ್ಯಾಜಿಕ್ ಭಾರತವನ್ನು ಎಷ್ಟು ಕಾಲ ಆಟದಲ್ಲಿಡುತ್ತದೆ? ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಇತರ ವೇಗಿಗಳಿಂದ ರನ್ ಗಳಿಸುವುದು ಏಕೆ ಕಷ್ಟವಾಗುತ್ತಿಲ್ಲ? ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹವರು ಶೀಘ್ರದಲ್ಲೇ ಬುಮ್ರಾ ಅವರನ್ನು ಬೆಂಬಲಿಸುತ್ತಾರೆಯೇ? ಲೀಡ್ಸ್‌ನಲ್ಲಿ ಇಂಗ್ಲೆಂಡ್ vs ಭಾರತ ಆರಂಭಿಕ ಟೆಸ್ಟ್‌ನ 2ನೇ ದಿನದಂದು ಭಾರತೀಯ ಆಡಳಿತ ಮಂಡಳಿ ಮತ್ತು ಅಭಿಮಾನಿಗಳ ಮನಸ್ಸಿನಲ್ಲಿ ಉಂಟಾದ ಪ್ರಶ್ನೆಗಳು ಇವು.
ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ಹೆಡಿಂಗ್ಲಿಯಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಭಾರತದ ಬೌಲಿಂಗ್ ಜವಾಬ್ದಾರಿಯನ್ನು ತಾವೊಬ್ಬರೇ ಹೊತ್ತುಕೊಂಡರು. ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಬುಮ್ರಾ ಮಾತ್ರ ಬೆದರಿಕೆಯೊಡ್ಡುವಂತೆ ಕಾಣುತ್ತಿದ್ದರು. ಬುಮ್ರಾ 13 ಓವರ್‌ಗಳಲ್ಲಿ 48 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು. ಭಾರತದ ಉಳಿದ ವೇಗಿಗಳು ಒಟ್ಟಾರೆಯಾಗಿ 27 ಓವರ್‌ಗಳಲ್ಲಿ 129 ರನ್‌ಗಳನ್ನು ನೀಡಿದರು. ಪ್ರತಿ ಓವರ್‌ಗೆ 4.77 ರನ್‌ಗಳಂತೆ ಬಿಟ್ಟುಕೊಟ್ಟು, ಒಂದೂ ವಿಕೆಟ್ ಪಡೆಯಲಿಲ್ಲ.
ಟೀಂ ಇಂಡಿಯಾದ ಇತರ ವೇಗಿಗಳಲ್ಲಿ ಗುಣಮಟ್ಟ, ನಿಯಂತ್ರಣ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ವ್ಯತ್ಯಾಸವು ಎದ್ದು ಕಾಣುತ್ತಿತ್ತು. ಬುಮ್ರಾ ಅವರ ಉಪನಾಯಕ ಎಂದೇ ಬಿಂಬಿಸಲಾಗಿರುವ ಮೊಹಮ್ಮದ್ ಸಿರಾಜ್ ನಿಖರತೆಯ ಕೊರತೆಯನ್ನು ಹೊಂದಿದ್ದರು. ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಆಡುತ್ತಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಯಾವುದೇ ಪರಿಣಾಮ ಬೀರುವಲ್ಲಿ ವಿಫಲರಾದರು.
ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ನಾಯಕ ಶುಭಮನ್ ಗಿಲ್ ಅವರು ಶಾರ್ದೂಲ್ ಠಾಕೂರ್ ಅವರನ್ನು 40ನೇ ಓವರ್‌ವರೆಗೆ ಬೌಲ್ ಮಾಡಿಸದಿರಲು ನಿರ್ಧರಿಸಿದರು. ಈಮಧ್ಯೆ, ಏಕೈಕ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.
2024ರಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಪರ್ತ್ ಟೆಸ್ಟ್ ಪಂದ್ಯದ ನಂತರ ಭಾರತದ ವೇಗಿಗಳು ಅಷ್ಟೇನು ಉತ್ತಮವಾಗಿಲ್ಲ. ಬುಮ್ರಾ ಮತ್ತು ಉಳಿದವರ ನಡುವಿನ ಅಂತರವು ಹೆಚ್ಚಿದೆ.
ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಭಾರತ 471ಕ್ಕೆ ಆಲೌಟ್ ಆಯಿತು. ನಂತರ, ಬೌಲಿಂಗ್ ಮಾಡಿದರು. ಬುಮ್ರಾ ಆರಂಭದಲ್ಲಿಯೇ ಜ್ಯಾಕ್ ಕ್ರಾಲಿಯನ್ನು ಔಟ್ ಮಾಡಿದರು ಮತ್ತು ನಂತರ ಬೆನ್ ಡಕೆಟ್ ಮತ್ತು ಜೋ ರೂಟ್ ಅವರನ್ನು ಔಟ್ ಮಾಡಿದರು. ಆದರೆ, ಎರಡು ಬಾರಿ ಕ್ಯಾಚ್‌ಗಳನ್ನು ಕೈಬಿಡಲಾಯಿತು. ಜಡೇಜಾ ಅವರಿಂದ ಡಕೆಟ್, ಜೈಸ್ವಾಲ್ ಅವರಿಂದ ಪೋಪ್ ಅವರ ಕ್ಯಾಚ್ ಅನ್ನು ಕೈಚೆಲ್ಲಲಾಯಿತು. ದುರದೃಷ್ಟವಶಾತ್, ದಿನದ ಕೊನೆಯ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡಿದಾಗ ಬುಮ್ರಾ ಓವರ್‌ಸ್ಟೆಪ್ ಮಾಡಿದ್ದರು.
ದಿನದ ಅಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದೆ. ಇದೇ ಪ್ರವೃತ್ತಿ ಮುಂದುವರಿದರೆ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ತಂಡದ ಮೇಲೆ ಹಿಡಿತ ಸಾಧಿಸುತ್ತಾರೆ. ಅಲ್ಲದೆ, ಬುಮ್ರಾ ಐದು ಟೆಸ್ಟ್‌ಗಳಲ್ಲಿಯೂ ಆಡುತ್ತಿಲ್ಲ. ಹೊರೆ ನಿರ್ವಹಣೆಯಿಂದಾಗಿ ಅವರು ಒಂದೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಹೀಗಾಗಿ, ಟೀಂ ಇಂಡಿಯಾದ ಬೌಲಿಂಗ್ ಪಡೆ ಮತ್ತಷ್ಟು ಪರಿಣಾಮಕಾರಿಯಾಗಿ ಮರಳುವ ಅಗತ್ಯವಿದೆ.
Advertisement