
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ನಾಯಕ ಶುಭ್‌ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾರ್ದೂಲ್ ಅವರನ್ನು ಆಲ್‌ರೌಂಡರ್ ಆಗಿ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಲಾಯಿತು. ಆದರೆ, ಅವರು ಬ್ಯಾಟಿಂಗ್‌ನಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಬೌಲಿಂಗ್ ವಿಷಯಕ್ಕೆ ಬಂದರೂ, ಅವರು 6 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ 38 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ತಂಡದ ಆಡಳಿತವು ಶಾರ್ದೂಲ್ ಅವರ ಬೌಲಿಂಗ್ ಮೇಲೆ ನಂಬಿಕೆ ಇಲ್ಲದಿದ್ದರೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರಲ್ಲಿ ಅರ್ಥವಿಲ್ಲ ಎಂದು ಕಾರ್ತಿಕ್ ಹೇಳಿದರು.
'ಶಾರ್ದೂಲ್ ಠಾಕೂರ್ ಅವರ ಬೌಲಿಂಗ್ ಮೇಲೆ ನಂಬಿಕೆ ಇಲ್ಲದಿದ್ದರೆ, ಅವರು ಅವರನ್ನು ಏಕೆ ಆಡಿಸುತ್ತಿದ್ದಾರೆ? ಅದು ಖಂಡಿತವಾಗಿಯೂ ಒಂದು ಸಮಸ್ಯೆ. ನೀವು ಒಬ್ಬ ಬೌಲರ್ ಅನ್ನು ನಂಬದಿದ್ದರೆ, ನೀವು ಅವರನ್ನು ಏಕೆ ಆಡಿಸಿದ್ದೀರಿ?. ಆದರೆ, ಇತ್ತ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಗಮನ ಹರಿಸಬೇಕಿದೆ. ನೀವು ನಾಲ್ಕು ವೇಗದ ಬೌಲರ್‌ಗಳನ್ನು ಆಡಿಸಿದಾಗ, ನೀವು ಶಾರ್ದೂಲ್‌ಗೆ ಸಮಾನ ಅವಕಾಶವನ್ನು ನೀಡಲು ಆಗುವುದಿಲ್ಲ ಎಂಬುದು ನನಗೆ ಅರ್ಥವಾಗಿದೆ' ಎಂದು ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ಹೇಳಿದರು.
'ಅವರು ಬೌಲಿಂಗ್ ಮಾಡಿದಾಗ, ಚೆನ್ನಾಗಿ ಮಾಡಿಲ್ಲ. ಆದರೆ, ನೀವು ಇಷ್ಟೊಂದು ಬೌಲಿಂಗ್ ಆಯ್ಕೆ ಇರುವಾಗಲೂ ಅವರಿಗೆ ಕೇವಲ ಆರು ಓವರ್‌ಗಳನ್ನು ನೀಡುವುದು ಉತ್ತಮವಲ್ಲ. ನನಗೆ ಶಾರ್ದೂಲ್ ಬಗ್ಗೆ ಬೇಸರವಾಗುತ್ತಿದೆ. ಆದರೆ, ಶುಭ್‌ಮನ್ ಏನು ಯೋಚಿಸುತ್ತಿದ್ದಾರೆಂದು ನನಗೆ ಅರ್ಥವಾಗುತ್ತದೆ. ಇತರ ಬೌಲರ್‌ಗಳು ಬೌಲಿಂಗ್ ಮಾಡುವಾಗ ಶಾರ್ದೂಲ್ ಕೂಡ ಇಂಗ್ಲೆಂಡ್ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸಲು ಸಮರ್ಥರಾಗಿದ್ದಾರೆ' ಎಂದು ಅವರು ಹೇಳಿದರು.
ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಕೂಡ ಯೂಟ್ಯೂಬ್‌ನಲ್ಲಿ ತಮ್ಮ ವಿಶ್ಲೇಷಣೆಯ ಸಮಯದಲ್ಲಿ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು. ಶಾರ್ದೂಲ್ ಅವರನ್ನು ತಂಡವು ಆಯ್ಕೆ ಮಾಡಿದ್ದರೂ, ಅವರು ಅವರ ಮೇಲೆ ನಂಬಿಕೆ ತೋರಿಸಿಲ್ಲ ಎಂದು ಹೇಳಿದರು.
'ನಾನು ಶಾರ್ದೂಲ್ ಠಾಕೂರ್ ಅವರ ಬಳಕೆಯ ಬಗ್ಗೆ ಯೋಚಿಸುತ್ತಿದ್ದೇನೆ. ಅವರು ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಅವರ ಮೇಲೆ ನಂಬಿಕೆ ತೋರಿಸಿಲ್ಲ. ಖಂಡಿತ, ಅವರು ಕೆಲವು ಓವರ್‌ಗಳನ್ನು ಬೌಲ್ ಮಾಡಿದರು ಮತ್ತು ಅದು ತುಂಬಾ ದುಬಾರಿಯಾಗಿತ್ತು. ಆದರೆ, ನೀವು ಅವರನ್ನು ದೀರ್ಘಾವಧಿಯವರೆಗೆ ಬೌಲ್ ಮಾಡಿಸಲಿಲ್ಲ. ಎಲ್ಲ ಬೌಲರ್‌ಗಳು 20ಕ್ಕೂ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದರು. ಆದರೆ, ಶಾರ್ದೂಲ್ ಠಾಕೂರ್ ಒಂದೇ ಅಂಕೆಯಲ್ಲಿದ್ದರು' ಎಂದು ಚೋಪ್ರಾ ಹೇಳಿದರು.
'ಶಾರ್ದೂಲ್ ಠಾಕೂರ್ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ, ನೀವು ಅವರನ್ನು ಏಕೆ ಆಡಿಸಿದ್ದೀರಿ?. ಇದು ದೊಡ್ಡ ಪ್ರಶ್ನೆಯಾಗಿದೆ' ಎಂದು ಅವರು ಹೇಳಿದರು.
Advertisement