ICC Test rankings: ಲೀಡ್ಸ್ ಟೆಸ್ಟ್‌ನಲ್ಲಿ ಸಾಧನೆ; 7ನೇ ಸ್ಥಾನಕ್ಕೇರಿದ ರಿಷಭ್ ಪಂತ್; ಟೆಸ್ಟ್ ಬೌಲರ್‌ಗಳ ರ್‍ಯಾಂಕಿಂಗ್‌‌ನಲ್ಲಿ ಬುಮ್ರಾ ಟಾಪ್

ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ಶತಕ ಬಾರಿಸಿದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ.
Rishabh Pant
ರಿಷಭ್ ಪಂತ್
Updated on

ನವದೆಹಲಿ: ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬುಧವಾರ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಗಳಿಸಿ ದಾಖಲೆ ಮಾಡಿದ್ದು, ಇದೀಗ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೇರಿದ್ದಾರೆ.

ಟೀಂ ಇಂಡಿಯಾದ ಹೊಸ ಟೆಸ್ಟ್ ನಾಯಕ ಶುಭ್‌ಮನ್ ಗಿಲ್ ಐದು ಸ್ಥಾನ ಜಿಗಿದು 20ನೇ ಸ್ಥಾನಕ್ಕೆ ತಲುಪಿದ್ದಾರೆ. ಶುಭಮನ್ ಗಿಲ್ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದರು. ಇಂಗ್ಲೆಂಡ್‌ಗೆ 371 ರನ್‌ಗಳ ಕಠಿಣ ಗುರಿಯನ್ನು ನೀಡಿದ ಹೊರತಾಗಿಯೂ, ಭಾರತ ತಂಡ ಸೋಲು ಕಂಡಿತು. ಐದು ವಿಕೆಟ್ ಅಂತರದ ಗೆಲುವು ಕಂಡ ಇಗ್ಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ಶತಕ ಬಾರಿಸಿದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪಂತ್, ಐಸಿಸಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಲೀಡ್ಸ್‌ನಲ್ಲಿ ನಡೆದ ರೋಮಾಂಚಕ ಟೆಸ್ಟ್ ಪಂದ್ಯದಲ್ಲಿ ಪಂತ್ 134 ಮತ್ತು 118 ರನ್ ಗಳಿಸಿದ್ದರು.

ಈ ಮೊದಲು ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಒಂದೇ ಟೆಸ್ಟ್ ಪಂದ್ಯದಲ್ಲಿ ಎರಡು ಶತಕಗಳನ್ನು ಬಾರಿಸಿದ ಏಕೈಕ ವಿಕೆಟ್ ಕೀಪರ್ ಆಗಿದ್ದರು. ಇದೀಗ 27 ವರ್ಷದ ಪಂತ್ ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ. ಕೆಎಲ್ ರಾಹುಲ್ ಸದ್ಯ 38ನೇ ಸ್ಥಾನದಲ್ಲಿದ್ದಾರೆ.

ಹೆಡಿಂಗ್ಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಮತ್ತೊಂದು ಐದು ವಿಕೆಟ್ ಗೊಂಚಲು ಪಡೆದ ನಂತರ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

Rishabh Pant
'ಶುದ್ಧ ಬ್ಯಾಟ್ಸ್‌ಮನ್‌ಗಳು ಕೆಲವೊಮ್ಮೆ ವಿಫಲರಾಗುತ್ತಾರೆ': ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲಿನ ಬಗ್ಗೆ ಗೌತಮ್ ಗಂಭೀರ್

ಈಮಧ್ಯೆ, ಇಂಗ್ಲೆಂಡ್ ತಂಡದ ಗೆಲುವಿನಲ್ಲಿ 62 ಮತ್ತು 149 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬೆನ್ ಡಕೆಟ್, ಶ್ರೇಯಾಂಕದಲ್ಲಿ ಐದು ಸ್ಥಾನಗಳ ಏರಿಕೆ ಕಂಡು ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ.

ಡಕೆಟ್ ಅವರ ತಂಡದ ಸಹ ಆಟಗಾರರಾದ ಓಲಿ ಪೋಪ್ (ಮೂರು ಸ್ಥಾನಗಳ ಏರಿಕೆ ಕಂಡು 19ನೇ ಸ್ಥಾನ) ಮತ್ತು ಜೇಮೀ ಸ್ಮಿತ್ (ಎಂಟು ಸ್ಥಾನಗಳ ಏರಿಕೆ ಕಂಡು 27ನೇ ಸ್ಥಾನ) ಕೂಡ ಪಟ್ಟಿಯಲ್ಲಿ ಮೇಲೇರಿದ್ದಾರೆ.

ಇಂಗ್ಲೆಂಡ್‌ನ ಅನುಭವಿ ಆಟಗಾರ ಜೋ ರೂಟ್ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ತಂಡದ ಸಹ ಆಟಗಾರ ಹ್ಯಾರಿ ಬ್ರೂಕ್ ಅವರಿಗೆ ಹತ್ತಿರದ ಸವಾಲುಗಾರರಾಗಿದ್ದಾರೆ.

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಒಂದೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಕೊಡುಗೆ ನೀಡಿದ ನಂತರ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರು ಸ್ಥಾನಗಳ ಏರಿಕೆ ಕಂಡು ಐದನೇ ಸ್ಥಾನಕ್ಕೇದ್ದಾರೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿದ್ದು, ಅವರ ಹಲವಾರು ಆಟಗಾರರು ಇತ್ತೀಚಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕೆಲವು ಸ್ಥಾನಗಳನ್ನು ಗಳಿಸಿದ್ದಾರೆ. ಗಾಲೆಯಲ್ಲಿ 163 ರನ್ ಗಳಿಸಿದ ನಂತರ ಮುಷ್ಫಿಕರ್ ರಹೀಮ್ ಮುನ್ನಡೆ ಸಾಧಿಸಿದ್ದಾರೆ.

ಟೆಸ್ಟ್ ಬ್ಯಾಟಿಂಗ್‌ನಲ್ಲಿ ರಹೀಮ್ 11 ಸ್ಥಾನಗಳ ಏರಿಕೆ ಕಂಡು 28ನೇ ಸ್ಥಾನಕ್ಕೇದ್ದಾರೆ. ಆದರೆ, ಅದೇ ಪಂದ್ಯದಲ್ಲಿ ಎರಡು ಶತಕಗಳನ್ನು ಗಳಿಸಿದ ನಂತರ ತಂಡದ ಸಹ ಆಟಗಾರ ನಜ್ಮುಲ್ ಹೊಸೈನ್ ಶಾಂಟೊ 21 ಸ್ಥಾನಗಳ ಜಿಗಿತದೊಂದಿಗೆ ಅದೇ ಪಟ್ಟಿಯಲ್ಲಿ 29ನೇ ಸ್ಥಾನಕ್ಕೆ ಏರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com