
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆಗಳು 2025ರ ಏಷ್ಯಾ ಕಪ್ ಮೇಲೆ ಪರಿಣಾಮ ಬೀರಿವೆ. ಭಯೋತ್ಪಾದಕ ದಾಳಿಯ ನಂತರ, ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಉಂಟಾಯಿತು. ಈ ಮೂಲಕ ಭಾರತದಲ್ಲಿ ಪಾಕಿಸ್ತಾನಿ ಕಲಾವಿದರು ಮತ್ತು ನಟರನ್ನು ಬಹಿಷ್ಕರಿಸಲಾಯಿತು. ಈ ಉದ್ವಿಗ್ನತೆಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಎಸಿಸಿ ಮತ್ತು ಐಸಿಸಿ ಕಾರ್ಯಕ್ರಮಗಳಲ್ಲಿ ಪಾಕಿಸ್ತಾನ ವಿರುದ್ಧದ ಭಾರತದ ಪಂದ್ಯಗಳನ್ನು ಬಹಿಷ್ಕರಿಸುವ ಸಾಧ್ಯತೆ ಇದೆ ಎಂಬ ವರದಿಗಳು ಬಂದವು. ಆದಾಗ್ಯೂ, ಹೊಸ ವರದಿಯೊಂದು ಹೊರಬಿದ್ದಿದ್ದು, ಏಷ್ಯಾ ಕಪ್ 2025 ಯೋಜನೆಯಂತೆ ನಡೆಯುವ ಸಾಧ್ಯತೆಯಿದೆ.
ಕ್ರಿಕ್‌ಬಜ್ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸೆಪ್ಟೆಂಬರ್‌ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಯುಎಇ ಭಾಗವಹಿಸುವ ಪಂದ್ಯಾವಳಿಯನ್ನು ಆಯೋಜಿಸಲು ಯೋಜಿಸುತ್ತಿದೆ.
'ಇನ್ನೂ ಯಾವುದೇ ನಿರ್ದಿಷ್ಟ ನಿರ್ಧಾರವನ್ನು ಅಂತಿಮಗೊಳಿಸಲಾಗಿಲ್ಲವಾದರೂ, ಮುಂದಿನ ವಾರ ಔಪಚಾರಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಅಲ್ಲದೆ, ಜುಲೈ ಮೊದಲ ವಾರದಲ್ಲಿ ಸಭೆ ಸೇರಿ ಆರು ತಂಡಗಳ ಟೂರ್ನಮೆಂಟ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಭರವಸೆಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹೊಂದಿದೆ' ಎಂದು ಕ್ರಿಕ್‌ಬಜ್ ಹೇಳಿದೆ.
ಪಂದ್ಯಾವಳಿಯ ಪ್ರಚಾರ ಚಟುವಟಿಕೆಗಳು ಸಹ ಪ್ರಾರಂಭವಾಗಿವೆ ಮತ್ತು ಯುಎಇ ಆತಿಥೇಯರಾಗಿ ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ. ಆದಾಗ್ಯೂ ಹೈಬ್ರಿಡ್ ಸ್ವರೂಪದಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಬಗ್ಗೆ ಕೆಲವು ಚರ್ಚೆಗಳು ನಡೆಯುತ್ತಿವೆ.
ಮೂಲತಃ ಭಾರತವು 2025ರ ಏಷ್ಯಾಕಪ್‌ಗೆ ಆತಿಥೇಯ ರಾಷ್ಟ್ರವಾಗಿತ್ತು. ಆದರೆ, ಪಾಕಿಸ್ತಾನದ ವಿರುದ್ಧದ ಉದ್ವಿಗ್ನತೆಯಿಂದಾಗಿ ಎಸಿಸಿ ಹೊಸ ಆತಿಥೇಯರನ್ನು ಹುಡುಕಬೇಕಾಯಿತು.
ಇದಕ್ಕೂ ಮೊದಲು ಲೀಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನ ಸಮಯದಲ್ಲಿ, ಏಷ್ಯಾಕಪ್ 2025ರ ಪ್ರಚಾರದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಭಾರತದ ಟಿ20 ನಾಯಕ (ಸೂರ್ಯಕುಮಾರ್ ಯಾದವ್), ಶ್ರೀಲಂಕಾ (ಚರಿತ್ ಅಸಲಂಕಾ) ಮತ್ತು ಬಾಂಗ್ಲಾದೇಶ (ನಜ್ಮುಲ್ ಹೊಸೈನ್ ಶಾಂಟೊ) ಇದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಸಿಸಿಯ ನೇತೃತ್ವ ವಹಿಸಿದ್ದಾರೆ. ಇತ್ತೀಚೆಗೆ, ಏಷ್ಯಾ ಕಪ್ ರದ್ದಾದರೆ ಅಥವಾ ಮುಂದೂಡಲ್ಪಟ್ಟರೆ ಆತಿಥೇಯ ಯುಎಇಯನ್ನು ಒಳಗೊಂಡ ತ್ರಿಕೋನ ಸರಣಿಯನ್ನು ಆಗಸ್ಟ್‌ನಲ್ಲಿ ಆಯೋಜಿಸಲು ಪಿಸಿಬಿ ಅಫ್ಘಾನಿಸ್ತಾನದ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯೊಂದು ಹೇಳಿತ್ತು.
'ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧಗಳು ಹದಗೆಟ್ಟಿರುವುದರಿಂದ ಸೆಪ್ಟೆಂಬರ್‌ನಲ್ಲಿ ಯೋಜಿಸಿದಂತೆ ಏಷ್ಯಾಕಪ್ ಭಾರತದಲ್ಲಿ ನಡೆಯುವ ಸಾಧ್ಯತೆ ಕಡಿಮೆ ಇರುವುದರಿಂದ, ಪಿಸಿಬಿ ಮತ್ತೊಂದು ತ್ರಿಕೋನ ಸರಣಿಯ ಪ್ರಸ್ತಾಪವನ್ನು ರೂಪಿಸುತ್ತಿದೆ' ಎಂದು ಪಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.
Advertisement