
2025ರ ಏಷ್ಯಾ ಕಪ್‌ಗೆ ಮೂರು ತಿಂಗಳು ಬಾಕಿ ಇದ್ದು, ಅಧಿಕೃತ ಪ್ರಸಾರಕ ಸೋನಿ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾವನ್ನು ಒಳಗೊಂಡ ಪ್ರಚಾರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಏಷ್ಯಾದ ಎರಡನೇ ಅತಿದೊಡ್ಡ ತಂಡವಾದ ಪಾಕಿಸ್ತಾನ ಕಾಣೆಯಾಗಿದೆ. ಪಾಕಿಸ್ತಾನವಿಲ್ಲದೆ ಏಷ್ಯಾ ಕಪ್ ನಡೆಯುತ್ತದೆ ಎಂದು ಹಲವರು ಊಹಿಸಿದ್ದರೂ, ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಬದಲಾಗಿ, ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಉಂಟಾದ ಇತ್ತೀಚಿನ ಬಿಕ್ಕಟ್ಟಿನ ನಂತರ ಪಾಕಿಸ್ತಾನದೊಂದಿಗೆ ಆಡುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಸರ್ಕಾರದಿಂದ ಸ್ಪಷ್ಟನೆ ಪಡೆಯಲಿದೆ.
ಭಾರತವು 2025ರ ಏಷ್ಯಾ ಕಪ್ ಅನ್ನು ಆಯೋಜಿಸಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜೊತೆಗಿನ ಸದ್ಯದ ಒಪ್ಪಂದದ ಪ್ರಕಾರ, ಪಂದ್ಯಾವಳಿ ನಡೆದರೂ ಸಹ, ಪಾಕಿಸ್ತಾನ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದೆ. ಆದಾಗ್ಯೂ, ಪುರುಷರ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಎದುರಿಸುವ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ ಇನ್ನೂ ತಿಳಿದಿಲ್ಲ. ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ಹೆಚ್ಚಿನ ಗಮನವಿಲ್ಲದ ಕಾರಣ ಮಹಿಳಾ ಕ್ರಿಕೆಟ್ ವಿಭಿನ್ನವಾಗಿದೆ. ಆದರೆ, ಪುರುಷರ ಕ್ರಿಕೆಟ್ ಅನ್ನು ಒಂದು ಶತಕೋಟಿಗೂ ಹೆಚ್ಚು ಜನರು ವೀಕ್ಷಿಸುತ್ತಾರೆ. ಆಪರೇಷನ್ ಸಿಂಧೂರ ನಂತರ, ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ನಕಾರಾತ್ಮಕ ದೃಷ್ಟಿಕೋನವಿದೆ. ಈ ವಿಷಯದ ಬಗ್ಗೆ ಸರ್ಕಾರದಿಂದ ಹೆಚ್ಚಿನ ಸ್ಪಷ್ಟತೆಯನ್ನು ನಾವು ಬಯಸುತ್ತೇವೆ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.
ಈ ಪಂದ್ಯಾವಳಿಯನ್ನು ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪಾಕಿಸ್ತಾನ ತನ್ನ ಪಂದ್ಯಗಳನ್ನು ಕೊಲಂಬೊ ಅಥವಾ ದುಬೈನಲ್ಲಿ ಆಡಲು ಸಜ್ಜಾಗಿದೆ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ ಪಾಕಿಸ್ತಾನದ ಇತರ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯ ಕುರಿತು ಬಿಸಿಸಿಐ ಇನ್ನೂ ಶ್ರೀಲಂಕಾ ಕ್ರಿಕೆಟ್ ಅಥವಾ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿಲ್ಲ.
ಭಾರತವು ಅಕ್ಟೋಬರ್ 5 ರಂದು ಕೊಲಂಬೊದಲ್ಲಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಇದು ಐಸಿಸಿ ಕಾರ್ಯಕ್ರಮ ಆಗಿರುವುದರಿಂದ, ಭಾರತವು ಪಾಕಿಸ್ತಾನವನ್ನು ಎದುರಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ.
ಏಷ್ಯಾ ಕಪ್ ವಿಚಾರದಲ್ಲಿ ಮುಖ್ಯವಾಗಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳ ಬಗ್ಗೆ ಹೆಚ್ಚು ಸ್ಪಷ್ಟತೆ ಬೇಕಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜೊತೆಗಿನ ಒಪ್ಪಂದದಿಂದ ಆದಾಯವನ್ನು ಗಳಿಸಲು ಪ್ರಸಾರಕರಿಗೆ ಕನಿಷ್ಠ ಒಂದಾದರೂ IND vs PAK ಪಂದ್ಯದ ಭರವಸೆ ಇದೆ. PCB ಮುಖ್ಯಸ್ಥ ಮೊಹ್ಸಿನ್ ನಖ್ವಿ ACC ಯ ಸದ್ಯದ ಅಧ್ಯಕ್ಷರಾಗಿದ್ದಾರೆ. IPL ಅಧ್ಯಕ್ಷ ಅರುಣ್ ಧುಮಾಲ್ ಕೂಡ ಮಂಡಳಿಯ ಸದಸ್ಯರಾಗಿದ್ದಾರೆ.
'ಪಂದ್ಯಗಳನ್ನು ಬಹಿಷ್ಕರಿಸುವ ಬಗ್ಗೆ ಯಾವುದೇ ಚರ್ಚೆ ಅಥವಾ ಚಿಂತನೆ ಇಲ್ಲ. ನಾವು ಐಸಿಸಿ ಕಾರ್ಯಕ್ರಮಗಳಲ್ಲಿ ಪಾಕಿಸ್ತಾನದೊಂದಿಗೆ ಆಡುತ್ತೇವೆ ಮತ್ತು ನಮ್ಮ ಸರ್ಕಾರ ಏನನ್ನೂ ಹೇಳದಿದ್ದರೆ ಅದೇ ರೀತಿಯಲ್ಲಿ ಮುಂದುವರಿಯುತ್ತದೆ. ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ, ಮುಂದಿನ ದಿನಗಳಲ್ಲಿ ನಮಗೆ ತಿಳಿಯುತ್ತದೆ' ಎಂದು ಬಿಸಿಸಿಐ ಅಧಿಕಾರಿ ಹೇಳಿದರು.
ಭಾರತ ಕ್ರಿಕೆಟ್ ತಂಡವು ಏಷ್ಯಾ ಕಪ್‌ನ ಹಾಲಿ ಚಾಂಪಿಯನ್ ಆಗಿದೆ. ಕಳೆದ ಬಾರಿಗಿಂತ ಭಿನ್ನವಾಗಿ, ಫೆಬ್ರುವರಿ-ಮಾರ್ಚ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಷ್ಯಾ ಕಪ್ 2025 ಅನ್ನು ಟಿ20 ಸ್ವರೂಪದಲ್ಲಿ ಆಡಲಾಗುತ್ತದೆ. ಪಿಸಿಬಿ ನೇತೃತ್ವದ ಎಸಿಸಿ ಜೂನ್ 5 ರಂದು ಪ್ರಾರಂಭವಾಗಬೇಕಿದ್ದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಅನ್ನು ಈಗಾಗಲೇ ಮುಂದೂಡಿದೆ. ಆದರೆ, ಎಸಿಸಿ ಪ್ರಸಾರ ಹಕ್ಕುಗಳಿಗಾಗಿ $170 ಮಿಲಿಯನ್ ಖರ್ಚು ಮಾಡಿದ ನಂತರ, ಪುರುಷರ ಏಷ್ಯಾ ಕಪ್ ಮುಂದುವರಿಯದಿದ್ದರೆ ಸೋನಿ ಪರಿಹಾರವನ್ನು ಕೋರಬಹುದು.
Advertisement