
ನವದೆಹಲಿ: ಹೆಡಿಂಗ್ಲಿ ಟೆಸ್ಟ್ ಸೋಲಿನೊಂದಿಗೆ ಭಾರತ ತಂಡ ಕಳೆದ ಒಂದು ವರ್ಷದಲ್ಲಿ ಆಡಿದ 11 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಸೋಲು ಕಂಡಿದ್ದು ಇದು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೂ ಮುನ್ನ ಕೋಚ್ ಗೌತಮ್ ಗಂಭೀರ್ ಗೆ ಒತ್ತಡ ಹೆಚ್ಚಿಸಿದೆ.
43 ವರ್ಷದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ತಂಡದ ಆಯ್ಕೆ, ಮ್ಯಾನೇಜ್‌ಮೆಂಟ್ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಅವರು ಹೇಗೆ ವರ್ತಿಸುತ್ತಾರೆ ಎಂಬುದರ ಕುರಿತು ಕೆಲವು ಕಡೆಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ನಂತರ ಭಾರತ ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ. ಗಂಭೀರ್ ಇಬ್ಬರು ಅನುಭವಿಗಳಲ್ಲಿ ಕನಿಷ್ಠ ಒಬ್ಬರ ನಿರ್ಗಮನದಲ್ಲಿ ಪಾತ್ರವಹಿಸಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಗಿದೆ.
ಹೊಸ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ, ಪ್ರವಾಸಿ ತಂಡವು ಐದು ಪಂದ್ಯಗಳ ಇಂಗ್ಲೆಂಡ್ ಸರಣಿಯ ಆರಂಭಿಕ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳಿಂದ ಸೋತಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಬುಧವಾರ ಆರಂಭವಾಗಲಿದೆ. ಗೌತಮ್ ಗಂಭೀರ್ ಗಮನಾರ್ಹ ಒತ್ತಡದಲ್ಲಿದ್ದಾರೆ. ಪರಿಸ್ಥಿತಿ ಹೆಚ್ಚು ಹೆಚ್ಚು ಉದ್ವಿಗ್ನವಾಗುತ್ತಿದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ಗಂಭೀರ್ ಬಾಂಗ್ಲಾದೇಶ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ಒಂದು ಗೆಲುವು ಸಾಧಿಸಿದ್ದಾರೆ. ಆದರೆ ನಾವು ನ್ಯೂಜಿಲೆಂಡ್ ವಿರುದ್ಧ ಮೂರು, ಆಸ್ಟ್ರೇಲಿಯಾ ವಿರುದ್ಧ ಮೂರು ಮತ್ತು ಈಗ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯವನ್ನು ಸೋತಿದ್ದೇವೆ. 2011ರಲ್ಲಿ ಭಾರತದ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಂಭೀರ್, ಕಳೆದ ವರ್ಷ ಜುಲೈನಲ್ಲಿ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾದರು.
Advertisement