
ನಾಗ್ಪುರ: ರಣಜಿ ಟ್ರೋಫಿ (Ranji Trophy 2025) ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವಿದರ್ಭ ತಂಡ ಕನ್ನಡಿಗ ಕರುಣ್ ನಾಯರ್ ಶತಕ, ಹರ್ಷ್ ದುಬೆ ಬೌಲಿಂಗ್ ದಾಖಲೆ ನೆರವಿನಿಂದ ಗೆಲುವಿನತ್ತ ದಾಪುಗಾಲಿರಿಸಿದೆ.
ಹೌದು.. ವಿದರ್ಭ ತಂಡವು ರಣಜಿ ಟ್ರೋಫಿ ಫೈನಲ್‌ನಲ್ಲಿ ಕೇರಳ ವಿರುದ್ಧ ಸಂಪೂರ್ಣ ಮೈಲುಗೈ ಸಾಧಿಸಿದ್ದು, ಕರುಣ್ ನಾಯರ್ ಅವರ ಅದ್ಭುತ ಅಜೇಯ ಶತಕದಿಂದ ವಿದರ್ಭ ತಂಡ ಗೆಲುವಿನತ್ತ ಸಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ವಿದರ್ಭ 379ರನ್ ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ್ದ ಕೇರಳ 342 ರನ್ ಗಳಿಗೆ ಆಲೌಟ್ ಆಗಿತ್ತು. 43 ರನ್ ಗಳ ಅಮೂಲ್ಯ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ವಿದರ್ಭ ಕರುಣ್ ನಾಯರ್ (132 ರನ್) ಅಜೇಯ ಶತಕ ಮತ್ತು ಡ್ಯಾನಿಶ್ ಮಾಲೆವಾರ್ (73 ರನ್) ಬ್ಯಾಟಿಂಗ್ ನೆರವಿನಿಂದ 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿದೆ.
ಕರುಣ್ ನಾಯರ್ ಶತಕ
ಮೊದಲ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಕರುಣ್, ಈ ಸೀಸನ್‌ನಲ್ಲಿ ನಾಲ್ಕನೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಕೇರಳ ತಂಡವನ್ನು 342 ರನ್‌ಗಳಿಗೆ ಆಲೌಟ್ ಮಾಡಿ 37 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ವಿದರ್ಭ ತಂಡ ನಾಲ್ಕನೇ ದಿನದಾಟದ ಮೊದಲ ಸೆಷನ್ನಲ್ಲಿಯೇ ಕೇವಲ ಏಳು ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಎದುರಿಸಿತು.
ಈ ಹಂತದಲ್ಲಿ ಕ್ರೀಸ್ ಗೆ ಬಂದ ಕನ್ನಡಿಗ ಕರುಣ್ ನಾಯರ್, 184 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ ಶತಕ ಬಾರಿಸಿದರು. ಕರುಣ್ ನಾಯರ್ ಗೆ ಡ್ಯಾನಿಶ್ ಮಾಲೆವಾರ್ ಉತ್ತಮ ಸಾಥ್ ನೀಡಿದರು. ಡ್ಯಾನಿಶ್ ಕೂಡ 162 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 73 ರನ್ ಗಳಿಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ 182 ರನ್‌ಗಳ ಅಮೋಘ ಜೊತೆಯಾಟ ನೀಡಿದರು. ಕರುಣ್ ನಾಯರ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ವಿದರ್ಭ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 379 ರನ್ ಕಲೆಹಾಕಿತು.
ಮೊದಲ ಇನ್ನಿಂಗ್ಸ್ ನಲ್ಲೂ ಉತ್ತಮ ಬ್ಯಾಟಿಂಗ್
ಕರುಣ್ ನಾಯರ್ ಮೊದಲ ಇನ್ನಿಂಗ್ಸ್ ನಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿ 86 ರನ್ ಕಲೆ ಹಾಕಿದ್ದರು. ಅಂತೆಯೇ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಕರುಣ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8,000 ರನ್‌ಗಳನ್ನು ಪೂರ್ಣಗೊಳಿಸಿದರು. ಅಲ್ಲದೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಯರ್ ಅವರ 36 ನೇ ಅರ್ಧಶತಕವಾಗಿತ್ತು. ಅಲ್ಲದೆ ನಾಯರ್ ಈಗ 2024/25 ರಣಜಿ ಟ್ರೋಫಿ ಆವೃತ್ತಿಯಲ್ಲಿ 800 ಕ್ಕೂ ಅಧಿಕ ರನ್ ಕಲೆಹಾಕಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಇದು ಕರುಣ್ ಸಿಡಿಸಿರುವ ನಾಲ್ಕನೇ ಶತಕವಾಗಿದೆ.
ಇತಿಹಾಸ ಸೃಷ್ಟಿಸಿದ ಹರ್ಷ್ ದುಬೆ
ಇದೇ ಪಂದ್ಯದಲ್ಲಿ ಕೇರಳ ತಂಡದ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ವಿರ್ಭದ ಉದಯೋನ್ಮುಖ ಆಟಗಾರ ಹರ್ಷ್ ದುಬೆ ವಿಶೇಷ ದಾಖಲೆ ನಿರ್ಮಿಸಿದರು. 22 ವರ್ಷದ ಹರ್ಷ್ ದುಬೆ ಅವರು ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಮುರಿದಿದ್ದಾರೆ. ಅವರು 69 ವಿಕೆಟ್‌ಗಳನ್ನು ಪಡೆದು ಅಶುತೋಷ್ ಅಮನ್ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಕೇರಳ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ದುಬೆ 9ನೇ ವಿಕೆಟ್ ಪಡೆಯುವುದರೊಂದಿಗೆ ಈ ಸೀಸನ್‌ನಲ್ಲಿ 69 ವಿಕೆಟ್ ಪೂರೈಸಿದರು. ಇದು ರಣಜಿ ಟ್ರೋಫಿಯ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯಾಗಿದೆ.
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕೇರಳ 342 ರನ್‌ಗಳಿಗೆ ಆಲೌಟ್ ಆಯಿತು. ಕೇರಳ ತಂಡವನ್ನು ಈ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಹರ್ಷ್ ದುಬೆ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯಾವಳಿಯಲ್ಲಿ ಈಗಾಗಲೇ ಸತತ ವಿಕೆಟ್‌ಗಳನ್ನು ಪಡೆದಿದ್ದ ಹರ್ಷ್ ದುಬೆ, ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದರು. ಇದೀಗ ಕೇರಳ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಹರ್ಷ್ ದುಬೆ 3 ವಿಕೆಟ್‌ಗಳನ್ನು ಕಬಳಿಸಿದರು.
ಈ ಮೂಲಕ ಹರ್ಷ್ ದುಬೆ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸರಿಗಟ್ಟಿದರು. ಈ ಮೊದಲು ಈ ದಾಖಲೆ ಬಿಹಾರದ ಅಶುತೋಷ್ ಅಮನ್ ಅವರ ಹೆಸರಿನಲ್ಲಿತ್ತು. ಅವರು 2018-19ರ ರಣಜಿಯಲ್ಲಿ ಗರಿಷ್ಠ 68 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ಆ ದಾಖಲೆಯನ್ನು ಹರ್ಷ್ ದುಬೆ ಮುರಿದಿದ್ದಾರೆ.
Advertisement