
ಲಾಹೋರ್: ಸದ್ಯ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಮುಂಬರುವ ಟಿ20 ಸರಣಿಗೆ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಸ್ಟಾರ್ ಆಟಗಾರರನ್ನೇ ಕೈಬಿಟ್ಟಿದೆ.
ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗಾಗಿ ಪಾಕಿಸ್ತಾನ ತಂಡದಿಂದ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅವರನ್ನು ಕೈಬಿಡಲಾಗಿದೆ.
ರಿಜ್ವಾನ್ ಬದಲಿಗೆ ಸಲ್ಮಾನ್ ಅಲಿ ಅಘಾ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್ ರೌಂಡರ್ ಶಾದಾಬ್ ಖಾನ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಮೊಹಮ್ಮದ್ ರಿಜ್ವಾನ್ ಅವರನ್ನು ಏಕದಿನ ತಂಡದ ನಾಯಕನಾಗಿ ಉಳಿಸಿಕೊಳ್ಳಲಾಗಿದೆ. ಬಾಬರ್ ಅಜಂ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ, ಬ್ಯಾಟರ್‌ಗಳಾದ ಸೌದ್ ಶಕೀಲ್ ಮತ್ತು ಕಮ್ರಾನ್ ಗುಲಾಮ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಏಕದಿನ ತಂಡದಿಂದ ವೇಗದ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರನ್ನು ಕೂಡ ಹೊರಗಿಡಲಾಗಿದೆ.
ಮಾರ್ಚ್ 16 ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಪಾಕಿಸ್ತಾನ ಆಡಲಿದೆ. ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಗಾಯಗೊಂಡಿದ್ದ ಸೈಮ್ ಅಯೂಬ್ ಮತ್ತು ಫಖಾರ್ ಜಮಾನ್ ಅವರು ತಂಡದಿಂದ ಹೊರಗುಳಿದಿದ್ದಾರೆ.
ಪಾಕಿಸ್ತಾನ ಏಕದಿನ ತಂಡ
ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ವಿಕೆಟ್ ಕೀಪರ್), ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಅಕೀಫ್ ಜಾವೇದ್, ಬಾಬರ್ ಅಜಂ, ಫಹೀಮ್ ಅಶ್ರಫ್, ಇಮಾಮ್ ಉಲ್ ಹಕ್, ಖುಷ್ದಿಲ್ ಶಾ, ಮೊಹಮ್ಮದ್ ಅಲಿ, ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಸೂಫಿಯಾನ್ ಮುಖೀಮ್, ತಯ್ಯಬ್ ತಾಹೀರ್.
ಟಿ20: ಸಲ್ಮಾನ್ ಅಲಿ ಅಘಾ (ನಾಯಕ), ಶಾದಾಬ್ ಖಾನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಹಸನ್ ನವಾಜ್, ಜಹಾಂದಾದ್ ಖಾನ್, ಖುಷ್ದಿಲ್ ಶಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಲಿ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ಇರ್ಫಾನ್ ಖಾನ್, ಒಮೈರ್ ಬಿನ್ ಯೂಸುಫ್, ಶಾಹೀನ್ ಶಾ ಆಫ್ರಿದಿ, ಸೂಫಿಯಾನ್ ಮುಖೀಮ್, ಉಸ್ಮಾನ್ ಖಾನ್.
Advertisement