
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿ ಫೈನಲ್ ಪಂದ್ಯ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ.
ಹೌದು.. ಭಾರತ ತಂಡವು ನಿನ್ನೆ ಅಂದರೆ ಮಂಗಳವಾರ, ಮಾರ್ಚ್ 4, 2025 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಗೆ ಲಗ್ಗೆ ಇಟ್ಟಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 265 ರನ್ ಗಳ ಗುರಿ ನೀಡಿತ್ತು.
ಇದಕ್ಕೆ ಉತ್ತರವಾಗಿ ಭಾರತ ತಂಡ ವಿರಾಟ್ ಕೊಹ್ಲಿ ಅವರ 84ರನ್ ಮತ್ತು ಕೆಎಲ್ ರಾಹುಲ್ ರ ಅಜೇಯ 44 ರನ್ ಗಳ ನೆರವಿನಿಂದ ಈ ಪಂದ್ಯವನ್ನು ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 267 ರನ್ ಗಳಿಸಿ 4 ವಿಕೆಟ್ ಅಂತರದಲ್ಲಿ ಜಯಗಳಿಸಿತು.
ಇನ್ನು ಈ ಹೈವೋಲ್ಟೇಜ್ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗಿದ್ದು, ಈ ಪಂದ್ಯ ದಾಖಲೆಯ ವೀಕ್ಷಕರ ಸಂಖ್ಯೆಯನ್ನು ಪಡೆದಿದೆ. ಹಾಲಿ ಐಸಿಸಿ ಟೂರ್ನಿಯ ಎಲ್ಲ ಪಂದ್ಯಗಳ ಪೈಕಿ ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ (60.2 ಕೋಟಿ ಅಥವಾ 602 ಮಿಲಿಯನ್) ಗರಿಷ್ಠ ವೀಕ್ಷಕರ ಸಂಖ್ಯೆಯನ್ನು ಹೊಂದಿತ್ತು. ಅಂದರೆ ಅಂದು ಸುಮಾರು 60 ಕೋಟಿ ಗೂ ಅಧಿಕ ಮಂದಿ ಆ ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ನಲ್ಲಿ ವೀಕ್ಷಿಸಿದ್ದರು.
ಭಾರತ-ಪಾಕ್ ಪಂದ್ಯದ ದಾಖಲೆ ಪತನ
ಆದರೆ ಇದೀಗ ಮೊದಲ ಸೆಮಿ ಫೈನಲ್ ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಈ ದಾಖಲೆಯನ್ನು ಕೂಡ ಹಿಂದಿಕ್ಕಿದ್ದು, ನಿನ್ನೆಯ ಪಂದ್ಯವನ್ನು ಬರೊಬ್ಬರಿ 67 ಕೋಟಿ ಮಂದಿ (66.9 ಕೋಟಿಗೂ ಹೆಚ್ಚು ಅಥವಾ(669 ಮಿಲಿಯನ್) ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜಿಯೋ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್ ಮೂಲಗಳು ಮಾಹಿತಿ ನೀಡಿದ್ದು, ಹಾಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ವೀಕ್ಷಕರನ್ನು ಹೊಂದಿದ ಪಂದ್ಯ ಎಂಬ ದಾಖಲೆಗೂ ಇಂಡೋ-ಆಸಿಸ್ ಪಂದ್ಯ ಪಾತ್ರವಾಗಿದೆ.
ಈ ಹಿಂದೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿನ ಕೊನೆಯ ಭಾರತ vs ಆಸ್ಟ್ರೇಲಿಯಾ ಪಂದ್ಯವು ದಾಖಲೆಯ 19.25 ಕೋಟಿ (192.5 ಮಿಲಿಯನ್) ವೀಕ್ಷಕರನ್ನು ಗಳಿಸಿತ್ತು. ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಈ ಪಂದ್ಯಕ್ಕೆ ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಪಂದ್ಯಕ್ಕೆ ಹೋಲಿಕೆ ಮಾಡಿದರೆ ನಿನ್ನೆಯ ಪಂದ್ಯದಲ್ಲಿ ಬರೊಬ್ಬರಿ ಶೇ. 76 ರಷ್ಟು ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಅಂತೆಯೇ ಬೆಳವಣಿಗೆಯಲ್ಲಿ ಶೇ. 160 ರಷ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದೆ.
ಅಂತೆಯೇ ಮಾರ್ಚ್ 2, 2025ರ ಭಾನುವಾರದಂದು ನಡೆದ ಭಾರತ vs ನ್ಯೂಜಿಲೆಂಡ್ ಪಂದ್ಯದ ವೀಕ್ಷಕರ ಸಂಖ್ಯೆ 40 ಕೋಟಿ (400 ಮಿಲಿಯನ್) ದಾಟಿತ್ತು ಎನ್ನಲಾಗಿದೆ.
Advertisement