
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತದ ವಿರುದ್ಧದ ಮೊದಲ ಸೆಮಿ ಫೈನಲ್ ನ ಸೋಲಿನ ಬಳಿಕ ಆಸ್ಟ್ರೇಲಿಯಾದ ದೈತ್ಯ ಆಟಗಾರ ಟ್ರಾವಿಸ್ ಹೆಡ್ (Travis Head) ಮೈದಾನದಲ್ಲೇ ಕಣ್ಣೀರು ಹಾಕಿದ ಫೋಟೋಗಳು ವೈರಲ್ ಆಗುತ್ತಿವೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ಪೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಟೂರ್ನಿಯ ಫೈನಲ್ ಗೇರಿದೆ.
ಈ ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ತಲೆನೋವಾಗಿದ್ದ ಟ್ರಾವಿಸ್ ಹೆಡ್ ರನ್ನು ಭಾರತದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಔಟ್ ಮಾಡಿದರು. ಬಳಿಕ ಭಾರತದ ಪರ ವಿರಾಟ್ ಕೊಹ್ಲಿ 98 ಎಸೆತಗಳಲ್ಲಿ 5 ಬೌಂಡರಿ ಸಹಿತ 84 ರನ್ ಕಲೆಹಾಕಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ಸೋಲಿನ ಬಳಿಕ ಮೈದಾನದಲ್ಲೇ ಟ್ರಾವಿಸ್ ಹೆಡ್ ಕಣ್ಣೀರು?
ಇನ್ನು ಈ ಮಹತ್ವದ ಸೆಮಿ ಫೈನಲ್ ಪಂದ್ಯದ ಸೋಲಿನ ಬಳಿಕ ಆಸ್ಚ್ರೇಲಿಯಾ ತಂಡ ಅಕ್ಷರಶಃ ಮಂಕಾಯಿತು. ಪ್ರಮುಖವಾಗಿ ಆಸಿಸ್ ನ ದೈತ್ಯ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ. ಆದರಲ್ಲೂ ಪ್ರಮುಖವಾಗಿ ಟ್ರಾವಿಸ್ ಹೆಡ್ ತಮ್ಮ ಪತ್ನಿಯನ್ನು ತಬ್ಬಿಕೊಂಡು ಅಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಫೋಟೋಗಳ ಅಸಲೀಯತ್ತು ಬಯಲು
ಇದೀಗ ಈ ವೈರಲ್ ಫೋಟೋಗಳ ಅಸಲೀಯತ್ತು ಬಯಲಾಗಿದ್ದು, ಈ ಫೋಟೋಗಳು ಕೃತಕಬುದ್ದಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದಲ್ಲಿ ತಯಾರಿಸಲಾದ ಫೋಟೋಗಳು ಎಂಬುದು ಬಯಲಾಗಿದೆ. ಈ ವೈರಲ್ ಚಿತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಟ್ರಾವಿಸ್ ಹೆಡ್ ವಿಭಿನ್ನ ಜೆರ್ಸಿ ತೊಟ್ಟಿರುವುದು ತಿಳಿಯುತ್ತದೆ. ಅಲ್ಲದೆ ಆಸಿಸ್ ತಂಡದ ಜೆರ್ಸಿಗೂ ಈ ವೈರಲ್ ಫೋಟೋದಲ್ಲಿ ಟ್ರಾವಿಸ್ ಹೆಡ್ ಧರಿಸಿರುವ ಜೆರ್ಸಿಗೂ ಸಾಕಷ್ಟು ಅಂತರವಿದೆ. ಹೀಗಾಗಿ ಇದು ಡೀಪ್‌ಫೇಕ್ ಆಧಾರಿತ ಫೋಟೋ ಎನ್ನಲಾಗಿದೆ.
Advertisement