
ನವದೆಹಲಿ: 2025ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರನ್ನು ಸಿಕ್ಸರ್ ಹೊಡೆಯಲು ಕೀಟಲೆ ಮಾಡಿದ್ದಾಗಿ ಪಾಕಿಸ್ತಾನದ ಯುವ ಸ್ಪಿನ್ನರ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಫೆಬ್ರವರಿ 23 ರಂದು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಿದ್ದವು. ಇನ್ನು ಕೊಹ್ಲಿ (ಅಜೇಯ 100 ರನ್) ಅದ್ಭುತ ಶತಕ ಗಳಿಸಿದ್ದು ಭಾರತ ಆರು ವಿಕೆಟ್‌ಗಳ ಜಯ ಸಾಧಿಸಿತು.
ಸ್ಪಿನ್ನಿಂಗ್ ಟ್ರ್ಯಾಕ್‌ಗಳಿಂದ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಅಬ್ರಾರ್ ಅಹ್ಮದ್ ಒಡ್ಡಿದ ಸವಾಲನ್ನು ಕಡಿಮೆ ಮಾಡುವ ಸಲುವಾಗಿ ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಹೆಚ್ಚು ಸ್ಫೋಟಕ ಬ್ಯಾಟಿಂಗ್ ಮಾಡಲಿಲ್ಲ. ಇತ್ತೀಚೆಗೆ, ಅಬ್ರಾರ್ ಅಹ್ಮದ್ ತಮ್ಮ ಬೌಲಿಂಗ್ ಅನುಭವವನ್ನು ಕೊಹ್ಲಿ ಜೊತೆ ಹಂಚಿಕೊಂಡರು. ಇದು ಅವರಿಗೆ 'ಕನಸು ನನಸಾದ' ಕ್ಷಣ ಎಂದು ಹೇಳಿದರು. 26 ವರ್ಷದ ಆಟಗಾರ ಭಾರತೀಯ ಬ್ಯಾಟ್ಸ್‌ಮನ್‌ನನ್ನು ಸಿಕ್ಸರ್ ಹೊಡಿ ಎಂದು ಕೀಟಲೆ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಆದರೆ ಭಾರತೀಯ ಬ್ಯಾಟ್ಸ್‌ಮನ್ ಆತುರಕ್ಕೆ ಬೀಳಲಿಲ್ಲ ಎಂದು ಹೇಳಿದರು.
ಇದಲ್ಲದೆ, ಪಂದ್ಯದ ನಂತರ ಕೊಹ್ಲಿ ತನಗೆ 'ಚೆನ್ನಾಗಿ ಬೌಲಿಂಗ್ ಮಾಡಿದೆ' ಎಂದು ಹೊಗಳಿದರು ಎಂದು ಅಹ್ಮದ್ ಬಹಿರಂಗಪಡಿಸಿದರು. ಅಂಡರ್ 19 ಪಂದ್ಯಗಳನ್ನಾಡುತ್ತಿದ್ದಾಗಿನಿಂದಲೂ ಭಾರತೀಯ ಕ್ರಿಕೆಟಿಗ ಕೊಹ್ಲಿಗೆ ಬೌಲಿಂಗ್ ಮಾಡಬೇಕೆನ್ನುವುದು ತನ್ನ ಕನಸಾಗಿತ್ತು ಎಂದು ಅಬ್ರಾರ್ ಹೇಳಿದ್ದಾರೆ. ಪಾಕಿಸ್ತಾನದ ಸ್ಪಿನ್ನರ್ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದ ನಂತರ ತಮ್ಮ ಸಂಭ್ರಮದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಅದಕ್ಕಾಗಿ ಕ್ಷಮೆಯಾಚಿಸಿದ್ದಾರೆ.
ಶುಭ್ಮನ್ ಗಿಲ್ ಅವರನ್ನು ಅಹ್ಮದ್ ಅದ್ಭುತ ಎಸೆತದೊಂದಿಗೆ ಔಟ್ ಮಾಡಿದರು. ಅದು ಪಂದ್ಯದ ಅವರ ಏಕೈಕ ವಿಕೆಟ್ ಆಗಿತ್ತು. ಭಾರತದ ಉಪನಾಯಕನನ್ನು ಔಟ್ ಮಾಡಿದ ನಂತರ, ಪಾಕಿಸ್ತಾನದ ಸ್ಪಿನ್ನರ್ ತನ್ನ ಎಂದಿನ ಶೈಲಿಯಲ್ಲಿ ಸಂಭ್ರಮಾಚರಿಸಿದ್ದರು. ಅವರತ್ತ ಕೈಗಳನ್ನು ಮಡಚಿ ದುರುಗುಟ್ಟಿ ನೋಡಿ ಮೈದಾನದಿಂದ ಹೊರಹೋಗುವಂತೆ ವಿಚಿತ್ರ ಸನ್ಹೆ ಮಾಡಿದ್ದರು. ಈ ಆಚರಣೆಯನ್ನು ಅನೇಕ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದರು. ವಾಸಿಮ್ ಅಕ್ರಮ್ ಕೂಡ ಅವರ ಆಚರಣೆಗೆ ಕಟುವಾಗಿ ಟೀಕಿಸಿದ್ದರು.
Advertisement