
ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ್ದು, 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾರನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಭಾನುವಾರ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ.
ಇತ್ತೀಚೆಗಷ್ಟೇ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, 'ಕ್ರೀಡಾಪಟುವಾಗಿ ರೋಹಿತ್ ಶರ್ಮಾ ಅವರ ದೇಹತೂಕ ಹೆಚ್ಚಾಗಿದೆ. ಅವರು ತೂಕವನ್ನು ಇಳಿಸಬೇಕಾಗಿದೆ ಮತ್ತು ಸಹಜವಾಗಿ ಅವರು ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ!' ಎಂದು ವಕ್ತಾರೆ ಶಮಾ ಮೊಹಮ್ಮದ್ ಬರೆದಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಅವರು ಪೋಸ್ಟ್ ಅನ್ನು ಅಳಿಸಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿದರು. 83 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 76 ರನ್ ಕಲೆಹಾಕಿದರು. ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗುರಿ ತಲುಪಿದ ಟೀಂ ಇಂಡಿಯಾ ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. ಭಾರತದ ಈ ಸಾಧನೆಗಾಗಿ ಶಮಾ, ನಾಯಕ ರೋಹಿತ್ ಶರ್ಮಾ ಮತ್ತು ತಂಡವನ್ನು ಅಭಿನಂದಿಸಿದ್ದಾರೆ.
'ಚಾಂಪಿಯನ್ಸ್ ಟ್ರೋಫಿ 2025 ಗೆಲ್ಲುವಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡಕ್ಕೆ ಅಭಿನಂದನೆಗಳು! ಅದ್ಭುತ ಪ್ರದರ್ಶನ ನೀಡಿ 76 ರನ್ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ ನಾಯಕ ರೋಹಿತ್ ಶರ್ಮಾ ಅವರಿಗೆ ಹ್ಯಾಟ್ಸ್‌ಆಫ್. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರು ನಿರ್ಣಾಯಕ ಇನಿಂಗ್ಸ್‌ಗಳನ್ನು ಆಡಿದರು ಮತ್ತು ಭಾರತವನ್ನು ವೈಭವದತ್ತ ಕೊಂಡೊಯ್ದರು!' ಎಂದು ಶಮಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕಿಯ ಟೀಕೆಗೆ ಪ್ರತಿಯಾಗಿ ಪಾಕಿಸ್ತಾನ ಮೂಲದ ಕ್ರೀಡಾ ಪತ್ರಕರ್ತೆ ರೋಹಿತ್ ಶರ್ಮಾ ಅವರು 'ಪ್ರಬಲ ಮತ್ತು ವಿಶ್ವ ದರ್ಜೆಯ ಪರ್ಫಾರ್ಮರ್' ಎಂದು ಹೇಳಿದಾಗ, 'ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಕಪಿಲ್ ದೇವ್, ರವಿಶಾಸ್ತ್ರಿ ಮತ್ತು ಉಳಿದ ನಾಯಕರಿಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರಲ್ಲಿ ಇರುವ ವಿಶೇಷ ಗುಣ ಯಾವುದು? ಎಂದು ಪ್ರಶ್ನಿಸಿದ್ದರು. ಇದು ಬಿಜೆಪಿ ನಾಯಕರು ಸೇರಿದಂತೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು.
1996 ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ICC ಪಂದ್ಯಾವಳಿಯನ್ನು ಆಯೋಜಿಸಿತ್ತು. ಆದರೆ, ಭದ್ರತೆಯ ಕಾರಣದಿಂದ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆದಿದ್ದವು. 2025ರ ಆವೃತ್ತಿಯಲ್ಲಿ ಆಡಿದ್ದ ಎಂಟು ತಂಡಗಳ ಪೈಕಿ ಸೋಲಿಲ್ಲದ ಸರದಾರನಾಗಿದ್ದ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
Advertisement