
ನವದೆಹಲಿ: ಅಚ್ಚರಿ ಬೆಳವಣಿಗೆಯೊಂದರಲ್ಲಿ ಮೆಗಾ ಹರಾಜಿನ ಮೂಲಕ ಬಿಕರಿಯಾಗಿದ್ದ ಆಟಗಾರನೋರ್ವ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿಯಿಂದ ಹೊರ ನಡೆದಿದ್ದು, ನಿಷೇಧ ಭೀತಿ ಎದುರಿಸುತ್ತಿದ್ದಾರೆ.
ಹೌದು.. ಈ ಹಿಂದೆ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 6.25 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದ ಇಂಗ್ಲೆಂಡ್ ತಂಡದ ಉದಯೋನ್ಮುಖ ಆಟಗಾರ ಹ್ಯಾರಿ ಬ್ರೂಕ್ ಇದೀಗ ತಮಗೆ ರೆಸ್ಟ್ ಬೇಕು ಎಂದು ನೆಪಹೇಳಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ಗಾಗಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಕ್ಷಮೆ ಯಾಚಿಸುತ್ತೇನೆ!
“ನನಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದು ಮೊದಲ ಆದ್ಯತೆ. ಮುಂಬರುವ ಐಪಿಎಲ್‌ನಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ಕಡೆಗೂ ತೆಗೆದುಕೊಂಡಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆ ತಂಡದ ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ.
ಈಗ ಇಂಗ್ಲೆಂಡ್ ಕ್ರಿಕೆಟ್‌ಗೆ ನಿಜವಾಗಿಯೂ ಮಹತ್ವದ ಸಮಯ ಮತ್ತು ಮುಂಬರುವ ಸರಣಿಗೆ ತಯಾರಿ ನಡೆಸಲು ನಾನು ಸಂಪೂರ್ಣವಾಗಿ ಬದ್ಧನಾಗಿರಬೇಕು. ಹೀಗಾಗಿಯೇ ಐಪಿಎಲ್‌ನಿಂದ ಹೊರಬರಲು ನಿರ್ಧರಿಸಿದ್ದೇನೆ, ಕ್ಷಮಿಸಿ” ಎಂದು ಹ್ಯಾರಿ ಬ್ರೂಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂತೆಯೇ, “ನನಗೀಗ ಬಹಳ ಕಷ್ಟಕರ ಸಮಯ. ನಾನು ತೆಗೆದುಕೊಂಡ ನಿರ್ಧಾರ ಬಹುತೇಕರಿಗೆ ಇಷ್ಟವಾಗಿಲ್ಲ ಅನ್ನೋದು ನನಗೆ ಗೊತ್ತಿದೆ. ಇಲ್ಲಿ ಯಾರಿಗೂ ನಾನು ಅರ್ಥ ಮಾಡಿಸುವ ಪ್ರಯತ್ನಕ್ಕೆ ಮುಂದಾಗಲ್ಲ. ಅದನ್ನು ಅವರೊಂದಿಗೆಯೇ ಬಿಟ್ಟು ಬಿಡುತ್ತೀನಿ. ದೇಶಕ್ಕಾಗಿ ಆಡುವುದು ನನ್ನ ಆದ್ಯತೆ ಮತ್ತು ಪ್ರಾಮುಖ್ಯತೆ" ಎಂದು ಬ್ರೂಕ್ ತಮ್ಮ ಸಾಮಾಜಿಕಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಿರುಗುಬಾಣವಾದ ನಿರ್ಧಾರ, 2 ವರ್ಷ ನಿಷೇಧ
ಇನ್ನು ಹ್ಯಾರಿ ಬ್ರೂಕ್ ಅವರ ಈ ನಿರ್ಧಾರ ಅವರಿಗೇ ಮುಳುವಾಗಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನ ಹೊಸ ನಿಯಮದ ಪ್ರಕಾರ, ಐಪಿಎಲ್ ಮೆಗಾ ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಅದರಂತೆ ಹ್ಯಾರಿ ಬ್ರೂಕ್ ಇನ್ನು ಎರಡು ವರ್ಷಗಳ ಕಾಲ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಅದರಂತೆ ಐಪಿಎಲ್ 2026 ಮತ್ತು 2027 ರ ಹರಾಜಿಗೆ ಇಂಗ್ಲೆಂಡ್ ಆಟಗಾರನನ್ನು ಪರಿಣಿಸಲಾಗುವುದಿಲ್ಲ . ಹಾಗಾಗಿ ಹ್ಯಾರಿ ಬ್ರೂಕ್ ಮತ್ತೆ ಐಪಿಎಲ್ ಆಡಬೇಕೆಂದರೆ 2028 ರವರೆಗೆ ಕಾಯಲೇಬೇಕು ಎನ್ನಲಾಗಿದೆ.
ಕಠಿಣ ನಿಯಮಕ್ಕೆ ಕಾರಣವೇನು?
IPL ನಲ್ಲಿ ಇಂತಹದೊಂದು ನಿಯಮ ಜಾರಿಗೊಳಿಸಲು ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಸಿಸಿಐ ಹೊಸ ನಿಯಮವನ್ನು ಪರಿಚಯಿಸಿದೆ.
Advertisement