
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿರುವ ಟೀಂ ಇಂಡಿಯಾ ಮೂರನೇ ಭಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿದ್ದರಿಂದ ಅನುಕೂಲವಾಗಿದೆ ಎಂದು ಹಲವು ಕ್ರಿಕೆಟ್ ತಜ್ಞರಿಂದ ಮಾತುಗಳು ಕೇಳಿಬಂದಿದ್ದು, 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪಿಚ್‌ನಿಂದ 'ಪ್ರಯೋಜನ' ಪಡೆದಿದೆ ಎಂಬ ಚರ್ಚೆಗಳಿಗೆ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಇತಿಶ್ರೀ ಹಾಡಿದ್ದಾರೆ.
ಉಭಯ ದೇಶಗಳ ರಾಜಕೀಯ ಉದ್ವಿಗ್ನತೆಯಿಂದಾಗಿ ಭದ್ರತೆಯ ಕಾರಣದಿಂದಾಗಿ ಭಾರತ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿದ ನಂತರ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತು. ಪಂದ್ಯಾವಳಿಯಲ್ಲಿ ಒಂದೇ ಒಂದು ಸೋಲನ್ನು ಕಾಣದ ಭಾರತ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಕೂಡ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿದೆ. ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಆಟಗಾರರು ರೋಹಿತ್ ಶರ್ಮಾ ನೇತೃತ್ವದ ತಂಡವು ತಮ್ಮ ಪಂದ್ಯಗಳ ಬಗ್ಗೆ ಮೊದಲೇ ತಿಳಿದಿರುವುದರಿಂದ ಮತ್ತು ಬೇರೆ ಸ್ಥಳಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲದ ಕಾರಣ ಇದು ಅವರಿಗೆ ದೊಡ್ಡ ಅನುಕೂಲವಾಗಿದೆ ಎಂದಿದ್ದಾರೆ.
ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಜಯಗಳಿಸಿದ ನಂತರ ಸುನೀಲ್ ಗವಾಸ್ಕರ್ ಇಂತಹ ಹೇಳಿಕೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಭಾರತಕ್ಕೆ ಇದು ಲಾಭ ತಂದುಕೊಟ್ಟಿದೆ ಎಂದರೆ ಇಂಗ್ಲೆಂಡ್ ಯಾಕೆ ಗೆಲ್ಲಲಿಲ್ಲ ಎಂದು ಪ್ರಶ್ನಿಸಿದ್ದಾರೆ.
'ಹೌದು, ಭಾರತ ಒಂದೇ ಸ್ಥಳದಲ್ಲಿ ಆಡುವುದದ ಮತ್ತು ಬೇರೊಂದು ಸ್ಥಳಕ್ಕೆ ಪ್ರಯಾಣಿಸಬೇಕಾಗಿಲ್ಲದ ಕಾರಣ ಲಾಭವಾಗಿದೆ ಎಂದು ಮಾತನಾಡುವ ಟೀಕಾಕಾರರು ಇರುತ್ತಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ಐಸಿಸಿ ಅದನ್ನು ನಿರ್ಧರಿಸಿತ್ತು. ಹೀಗಾಗಿ, ಆ ಬಗ್ಗೆ ಯಾವುದೇ ನಕಾರಾತ್ಮಕ ಹೇಳಿಕೆಯು ಇದ್ದರೆ ಅದು ಆಗಲೇ ಬರಬೇಕಿತ್ತು. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಯಶಸ್ಸಿಗೆ 'ದುಬೈನಲ್ಲಿ ಆಡಿದ್ದು' ಕಾರಣವಾಗಿದ್ದರೆ, ಇಂಗ್ಲೆಂಡ್ ಮೊದಲೇ ಐಸಿಸಿ ಟ್ರೋಫಿಗಳನ್ನು ಗೆಲ್ಲಬೇಕಿತ್ತು. 2019ಕ್ಕಿಂತ ಮೊದಲು ಹಲವಾರು ಬಾರಿ ಪ್ರಮುಖ ಐಸಿಸಿ ಪಂದ್ಯಾವಳಿಗಳನ್ನು ಇಂಗ್ಲೆಂಡ್‌ನಲ್ಲೇ ಆಯೋಜಿಸಿದ್ದರೂ, ಇಂಗ್ಲೆಂಡ್ ತನ್ನ ಮೊದಲ ಐಸಿಸಿ ಟ್ರೋಫಿಯನ್ನು 2019 ರಲ್ಲಿ ಗೆದ್ದಿತು ಏಕೆ' ಎಂದು ಗವಾಸ್ಕರ್ ಸ್ಪೋರ್ಟ್‌ಸ್ಟಾರ್‌ಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದ ಗವಾಸ್ಕರ್, ಸಮತೋಲನದಿಂದ ಕೂಡಿದ ತಂಡವೇ ಭಾರತದ ಗೆಲುವಿಗೆ ಪ್ರಮುಖ ಕಾರಣ ಎಂದು ಹೇಳಿದರು.
'ಭಾರತವು ಸಮತೋಲಿತ ತಂಡವನ್ನು ಹೊಂದಿದೆ. ಹೀಗಾಗಿಯೇ ತಂಡವು ಗೆದ್ದಿದೆ. ಪಂದ್ಯಾವಳಿಯ ವಿವಿಧ ಸಮಯಗಳಲ್ಲಿ, ತಂಡದಲ್ಲಿದ್ದ ವಿಭಿನ್ನ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ನಾಯಕನಾಗಿ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಅವರ ನಾಯಕತ್ವ ತಂಡದ ಬೆನ್ನಿಗಿತ್ತು. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಎಂಎಸ್ ಧೋನಿ ಅವರೊಂದಿಗೆ ಸೇರಿಕೊಂಡರು. ತಮ್ಮ ನಿವೃತ್ತಿ ಬಗೆಗಿನ ವದಂತಿಗಳನ್ನು ರೋಹಿತ್ ಅವರೇ ತಳ್ಳಿಹಾಕಿದ್ದಾರೆ ಮತ್ತು ಅವರು ಇನ್ನೂ ಸ್ವರೂಪದಿಂದ ನಿವೃತ್ತಿ ಹೊಂದಲು ನಿರ್ಧರಿಸಿಲ್ಲ ಎಂದಿದ್ದಾರೆ' ಎಂದು ಅವರು ಹೇಳಿದರು.
Advertisement