ಒಲ್ಲೆ ಎಂದ ಕನ್ನಡಿಗ ಕೆಎಲ್ ರಾಹುಲ್; ಅಕ್ಷರ್ ಪಟೇಲ್‌ಗೆ ಒಲಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ

ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಷಭ್ ಪಂತ್ ಅವರನ್ನು ತಂಡದಿಂದ ಕೈಬಿಟ್ಟಿದ್ದ ಡಿಸಿ ಬಳಿಕ 14 ಕೋಟಿ ರೂಪಾಯಿ ನೀಡಿ ಕೆಎಲ್ ರಾಹುಲ್ ಅವರನ್ನು ಖರೀದಿಸಿತ್ತು.
ಒಲ್ಲೆ ಎಂದ ಕನ್ನಡಿಗ ಕೆಎಲ್ ರಾಹುಲ್; ಅಕ್ಷರ್ ಪಟೇಲ್‌ಗೆ ಒಲಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ವಿಶ್ವದ ಶ್ರೀಮಂತ ಲೀಗ್‌ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ನಾಯಕತ್ವವನ್ನು ತಿರಸ್ಕರಿಸಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಕ್ಷರ್ ಪಟೇಲ್ ಅವರನ್ನು ಅಧಿಕೃತವಾಗಿ ನಾಯಕನನ್ನಾಗಿ ಘೋಷಿಸಿದೆ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಷಭ್ ಪಂತ್ ಅವರನ್ನು ತಂಡದಿಂದ ಕೈಬಿಟ್ಟಿದ್ದ ಡಿಸಿ ಬಳಿಕ 14 ಕೋಟಿ ರೂಪಾಯಿ ನೀಡಿ ಕೆಎಲ್ ರಾಹುಲ್ ಅವರನ್ನು ಖರೀದಿಸಿತ್ತು. ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ನಾಯಕತ್ವ ವಹಿಸಿಕೊಂಡಿದ್ದ ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ನಾಯಕನ ಜವಾಬ್ದಾರಿಯನ್ನು ನಿರಾಕರಿಸಿದ್ದರು. ಈ ಬೆನ್ನಲ್ಲೇ ಡೆಲ್ಲಿ ತಂಡದೊಂದಿಗೆ ಹಲವು ವರ್ಷಗಳಿಂದ ಇರುವ ಭಾರತದ ಆಟಗಾರ ಅಕ್ಷರ್ ಪಟೇಲ್ ಅವರಿಗೆ ಈಗ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನ ನೀಡಲಾಗಿದೆ.

ಕೆಎಲ್ ರಾಹುಲ್ ಅವರನ್ನು ತಂಡದ ನಾಯಕನನ್ನಾಗಿ ಮಾಡುವ ಉದ್ದೇಶದಿಂದಲೇ ಖರೀದಿಸಲಾಗಿತ್ತು. ಆದರೆ, ರಾಹುಲ್ ಮತ್ತು ಆಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಏಪ್ರಿಲ್ ವೇಳೆಗೆ ಮಗು ಜನಿಸಲಿದೆ. ಹೀಗಾಗಿ ಅವರು ನಾಯಕನ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಗೆ ರಿಷಭ್ ಪಂತ್ ಅವರ ಸ್ಥಾನಕ್ಕೆ ನಾಯಕನನ್ನಾಗಿ ಅಕ್ಷರ್ ಪಟೇಲ್ ಅವರನ್ನು ನಾಯಕನನ್ನಾಗಿ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ.

ಕಳೆದ ಆವೃತ್ತಿಯಲ್ಲಿ ಅಕ್ಷರ್, ಸುಮಾರು 30ರ ಸರಾಸರಿಯಲ್ಲಿ 235 ರನ್ ಗಳಿಸಿದ್ದರು ಮತ್ತು 7.65ರ ಎಕಾನಮಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು.

'ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುವುದು ನನಗೆ ಅತ್ಯಂತ ಗೌರವದ ಸಂಗತಿಯಾಗಿದೆ. ನಾನು ಕ್ರಿಕೆಟಿಗನಾಗಿ ಬೆಳೆದಿದ್ದೇನೆ ಮತ್ತು ಈ ತಂಡವನ್ನು ಮುನ್ನಡೆಸಲು ಸಿದ್ಧವಾಗಿದ್ದು, ಆತ್ಮವಿಶ್ವಾಸ ಹೊಂದಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಮ್ಮ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ' ಎಂದು ನಾಯಕನಾಗಿ ನೇಮಕಗೊಂಡ ಅಕ್ಷರ್ ಪಟೇಲ್ ಹೇಳಿದ್ದಾರೆ.

'ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕ್ರಿಕೆಟಿಗ ಮತ್ತು ನಾಯಕನಾಗಿ ಅಕ್ಷರ್ ಅವರ ಪ್ರಗತಿಯನ್ನು ನಾನು ನೇರವಾಗಿ ನೋಡಿದ್ದೇನೆ' ಎಂದು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಹೇಳಿದರು.

'2019 ರಲ್ಲಿ ವೈಯಕ್ತಿಕವಾಗಿ ನಾನು ಅಕ್ಷರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರಿಂದ, ಅವರೊಂದಿಗಿನ ನನ್ನ ಸಂಬಂಧ ಕ್ರಿಕೆಟ್ ಅನ್ನು ಮೀರಿದದ್ದಗಿದೆ. ಕಳೆದ ಎರಡು ವರ್ಷಗಳಿಂದ ಅವರನ್ನು ತಂಡದ ಉಪನಾಯಕನಾಗಿ ನೋಡಿರುವುದರಿಂದ, ಅವರು ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಆಟಗಾರರನ್ನು ಪ್ರೇರೇಪಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಅತ್ಯುತ್ತಮವಾಗಿ ಬೌಲಿಂಗ್‌ ಮಾಡುವ ಅವರು, ಇತ್ತೀಚೆಗೆ ಭಾರತದ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲುವಿನ ಅಭಿಯಾನಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಪ್ರದರ್ಶಿಸಿದ ಅದ್ಭುತ, ಪ್ರಬುದ್ಧ ಕ್ರಿಕೆಟಿಗರಾಗಿ ಅರಳಿದ್ದಾರೆ. ಕೆಎಲ್ ರಾಹುಲ್, ಫಾಫ್ ಡು ಪ್ಲೆಸಿಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಹಿರಿಯರು ನಮ್ಮ ತಂಡದ ಭಾಗವಾಗಿರುವುದರಿಂದ, ಇದು ದೆಹಲಿ ಕ್ಯಾಪಿಟಲ್ಸ್‌ಗೆ ವಿಶೇಷವಾದದ್ದೊಂದು ಆರಂಭ ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳಿದರು.

ಒಲ್ಲೆ ಎಂದ ಕನ್ನಡಿಗ ಕೆಎಲ್ ರಾಹುಲ್; ಅಕ್ಷರ್ ಪಟೇಲ್‌ಗೆ ಒಲಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ
IPL 2025: ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ ದೊಡ್ಡ ಆಫರ್ ತಿರಸ್ಕರಿಸಿದ ಕನ್ನಡಿಗ ಕೆಎಲ್ ರಾಹುಲ್!

ಅಕ್ಷರ್ ಪಟೇಲ್ ಅವರು 2019ರಿಂದ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಅವರನ್ನು 18 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. 150 ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ, 130.88 ಸ್ಟ್ರೈಕ್ ರೇಟ್‌ನಲ್ಲಿ 1653 ರನ್ ಗಳಿಸಿದ್ದಾರೆ ಮತ್ತು 123 ವಿಕೆಟ್‌ಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com