
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ನೇ ಪಂದ್ಯಾವಳಿ ಮುಕ್ತಾಯಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಜಯ ಸಾಧಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಪಾಕಿಸ್ತಾನದ ಮಾಜಿ ಆಟಗಾರ ಬಸಿತ್ ಅಲಿ, ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯ ತಂಡದಲ್ಲಿ ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಮಾಡಿದ್ದು, ಆರು ಭಾರತೀಯ ಕ್ರಿಕೆಟಿಗರನ್ನು ಸೇರಿಸಿಕೊಂಡಿದ್ದಾರೆ.
ಬಸಿತ್ ಅವರು ರೋಹಿತ್ ಶರ್ಮಾ ಮತ್ತು ನ್ಯೂಜಿಲೆಂಡ್‌ನ ಆಲ್‌ರೌಂಡರ್ ರಚಿನ್ ರವೀಂದ್ರ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ನಂತರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಿಕೊಂಡಿದ್ದು, ಗ್ಲೆನ್ ಫಿಲಿಪ್ಸ್ 6ನೇ ಸ್ಥಾನದಲ್ಲಿ ಮತ್ತು ಅಫ್ಘಾನಿಸ್ತಾನದ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್‌ಜೈ 7ನೇ ಸ್ಥಾನ ಬ್ಯಾಟಿಂಗ್ ಮಾಡಲಿದ್ದಾರೆ.
'ನನ್ನ ತಂಡದ ಪ್ಲೇಯಿಂಗ್ ಇಲೆವೆನ್ ಅನ್ನು ನಾನು ಆಯ್ಕೆ ಮಾಡಿದ್ದೇನೆ. ದುಬೈನಲ್ಲಿ ನಡೆದ ಪಂದ್ಯಗಳನ್ನು ನಾನು ನೋಡಿದ್ದೇನೆ. ಗಡಾಫಿಯಲ್ಲಿಯೂ ಉತ್ತಮ ಪ್ರದರ್ಶನ ಮೂಡಿಬಂದಿದೆ ಎಂದು ನಾನು ಒಪ್ಪುತ್ತೇನೆ. ಆದರೆ, ನಾನು ಆಯ್ಕೆ ಮಾಡಿರುವ ಪ್ಲೇಯಿಂಗ್ ಇಲೆವೆನ್ ಸರಿಯಾಗಿದೆ ಎಂದು ನಾನು ಭಾವಿಸಿದೆ. ಐಸಿಸಿ ಮಾಡಿದ ರೀತಿಯಲ್ಲಿ ನಾನು ಮಾಡುವುದಿಲ್ಲ. ನನ್ನ ತಂಡದ ನಾಯಕ ರೋಹಿತ್ ಶರ್ಮಾ ಆಗಿದ್ದಾರೆ. ಪಂದ್ಯಾವಳಿಯಲ್ಲಿ ಅವರು ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 76 ರನ್ ಗಳಿಸಿದ್ದು ಗೆಲುವಿಗೆ ಕಾರಣವಾಯಿತು' ಎಂದು ಬಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
'ನಂಬರ್ 2 ರಲ್ಲಿ ಬ್ಯಾಟಿಂಗ್‌ಗೆ ಬರುವ ರಚಿನ್ ರವೀಂದ್ರ ಎರಡು ಶತಕ ಸಿಡಿಸಿರುವುದು ದೊಡ್ಡ ವಿಷಯ. 3ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ. ಅವರೊಬ್ಬ ಕಲಾವಿದ ಮತ್ತು ಆಡುವವರಿಗೆ ಮಾತ್ರ ಅವರು ಹೇಗೆ ಆಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾನು ಶ್ರೇಯಸ್ ಅಯ್ಯರ್ ಅವರನ್ನು 4ನೇ ಸ್ಥಾನದಲ್ಲಿ ಇರಿಸಿದ್ದೇನೆ. ಅವರು ಕೂಡ ಬಹಳಷ್ಟು ಸುಧಾರಿಸಿದ್ದಾರೆ. ಭಾರತದ ಗೆಲುವಿನಲ್ಲಿ ಅವರ ಬ್ಯಾಟಿಂಗ್ ಕೂಡ ದೊಡ್ಡ ಪಾತ್ರ ವಹಿಸಿದೆ. ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ ಮತ್ತು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ' ಎಂದು ಅವರು ಹೇಳಿದರು.
'5ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಇದ್ದಾರೆ. ವಿಕೆಟ್ ಕೀಪರ್ ಮತ್ತು ಸಂಪೂರ್ಣ ಬ್ಯಾಟ್ಸ್‌ಮನ್ ಆಗಿದ್ದಾರೆ. 6ನೇ ಕ್ರಮಾಂಕದಲ್ಲಿ ಅತ್ಯುತ್ತಮ ಫೀಲ್ಡರ್ ಗ್ಲೆನ್ ಫಿಲಿಪ್ಸ್ ಇದ್ದಾರೆ. ಅವರು ಅಪಾಯಕಾರಿ ಬೌಲರ್ ಮತ್ತು ಅಪಾಯಕಾರಿ ಬ್ಯಾಟ್ಸ್‌ಮನ್ ಕೂಡ. 7ನೇ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್‌ಜೈ ಇದ್ದು, ತಾವು ಅದ್ಭುತ ಆಲ್‌ರೌಂಡರ್ ಎಂದು ತೋರಿಸಿದ್ದಾರೆ' ಎಂದು ಅವರು ವಿವರಿಸಿದರು.
ಬೌಲಿಂಗ್ ವಿಭಾಗಕ್ಕೆ ಬಂದರೆ, ಮಿಚೆಲ್ ಸ್ಯಾಂಟ್ನರ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಸ್ಪಿನ್ ಬೌಲರ್‌ಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೇಗಿಗಳಾಗಿ ಮ್ಯಾಟ್ ಹೆನ್ರಿ ಮತ್ತು ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿದ್ದಾರೆ.
'ಅಕ್ಷರ್ ಪಟೇಲ್ ಅಥವಾ ಮಿಚೆಲ್ ಸ್ಯಾಂಟ್ನರ್ ನಂತರ ಬರುತ್ತಾರೆ. ನನ್ನ ಶೇ 70 ರಷ್ಟು ಮತಗಳು ಸ್ಯಾಂಟ್ನರ್‌ಗೆ ಮತ್ತು ಶೇ 30 ರಷ್ಟು ಮತಗಳು ಅಕ್ಷರ್‌ಗೆ. 9ನೇ ಸ್ಥಾನದಲ್ಲಿ ಮ್ಯಾಟ್ ಹೆನ್ರಿ. ಅವರು ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 10ನೇ ಸ್ಥಾನದಲ್ಲಿ ಮೊಹಮ್ಮದ್ ಶಮಿ. ಗಾಯದಿಂದ ಚೇತರಿಸಿಕೊಂಡ ಬಳಿಕ ವಿಶ್ವಕಪ್‌ನಲ್ಲಿ ಮಾಡಿದಂತೆ ಇಲ್ಲಿಯೂ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. 11ನೇ ಸ್ಥಾನದಲ್ಲಿ ವರುಣ್ ಚಕ್ರವರ್ತಿ ಇದ್ದಾರೆ. ಎರಡು ಪಂದ್ಯಗಳ ನಂತರ ಅವರು ಪ್ರದರ್ಶನ ನೀಡಿದ ರೀತಿ ತುಂಬಾ ಚೆನ್ನಾಗಿತ್ತು. ಇದು ನನ್ನ ತಂಡ' ಎಂದು ಹೇಳಿದ್ದಾರೆ.
Advertisement