
ವಿಶ್ವದ ಅತಿದೊಡ್ಡ ಫ್ರಾಂಚೈಸ್ ಆಧಾರಿತ ಕ್ರಿಕೆಟ್ ಪಂದ್ಯಾವಳಿ ಇಂಡಿಯನ್ ಪ್ರೀಮಿಯರ್ ಲೀಗ್ ಗೆ (IPL) ಬಿಗ್ ಚಾಲೆಂಜ್ ಹಾಕಲು ಸೌದಿ ಅರೇಬಿಯಾ ಮುಂದಾಗಿದೆ. ಜಾಗತಿಕ T20 ಲೀಗ್ ಆಯೋಜನೆಗೆ ಯೋಜಿಸಿದ್ದು, ICC ಅನುಮೋದನೆಗಾಗಿ ಕಾಯುತ್ತಿದೆ.
ದಿ ಏಜ್ ಪ್ರಕಾರ, ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್‌ಗಳ ಮಾದರಿಯಲ್ಲಿ ಲೀಗ್ ಎಂಟು ತಂಡಗಳನ್ನು ಒಳಗೊಂಡಿರುತ್ತದೆ. ವಾರ್ಷಿಕವಾಗಿ ನಾಲ್ಕು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಮರು ರೂಪಿಸಿದ IPL ಮತ್ತು BBL ಕ್ರಿಕೆಟ್ ನಂತೆ ಸೌದಿ ಅರೇಬಿಯಾದ ಲೀಗ್ ದೇಶದ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಸ್ಥಳೀಯ ಮತ್ತು ವಿದೇಶಿ ಆಟಗಾರರಿಗೆ ಅವಕಾಶಗಳನ್ನು ಒದಗಿಸುತ್ತದೆ.
ಈ ಲೀಗ್ ಆಯೋಜನೆಗೆ ಸೌದಿ ಅರೇಬಿಯಾದ SRJ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್ ನೆರವು ನೀಡುತ್ತಿದೆ. ಇದು ಸೌದಿ ಅರೇಬಿಯಾ ಸಾಮ್ರಾಜ್ಯದ $1 ಟ್ರಿಲಿಯನ್ ಸಂಪತ್ತಿನ ನಿಧಿಯ ಕ್ರೀಡಾ ವಿಭಾಗವಾಗಿದೆ. ಸದ್ಯ ಐಸಿಸಿ ಅನುಮೋದನೆಗಾಗಿ ಚರ್ಚಿಸುತ್ತಿದೆ.
ನೀಲ್ ಮ್ಯಾಕ್ಸ್‌ವೆಲ್ ಕಲ್ಪನೆ: ಇದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ನೀಲ್ ಮ್ಯಾಕ್ಸ್‌ವೆಲ್ (Neil Maxwell) ಕಲ್ಪನೆಯಾಗಿದೆ. ಅವರು ಆಸ್ಟ್ರೇಲಿಯಾದ ಕ್ರಿಕೆಟಿಗರ ಸಂಘ ಮತ್ತು ಕ್ರಿಕೆಟ್ ಎನ್‌ಎಸ್‌ಡಬ್ಲ್ಯೂ ಸೇರಿದಂತೆ ವಿವಿಧ ಕ್ರಿಕೆಟ್ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘದ ಸಹಯೋಗದೊಂದಿಗೆ ಪ್ರಮುಖ ಕ್ರಿಕೆಟ್ ಸವಾಲುಗಳನ್ನು ಪರಿಹರಿಸಿ, ವಿಶೇಷವಾಗಿ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಸಾಂಪ್ರದಾಯಿಕ ಶಕ್ತಿ ಕೇಂದ್ರಗಳನ್ನು ಮೀರಿ ಟೆಸ್ಟ್ ಕ್ರಿಕೆಟ್‌ನ ಸುಸ್ಥಿರತೆಯನ್ನು ಖಾತ್ರಿಪಡಿಸಿ, ಆದಾಯ ಗಳಿಸುವುದು ಈ ಲೀಗ್ ನ ಗುರಿಯಾಗಿದೆ.
ಸೌದಿ ಅರೇಬಿಯಾ 800 ಮಿಲಿಯನ್ ಡಾಲರ್ ಹೂಡಿಕೆ: ಹೊಸ ಲೀಗ್ ಅನ್ನು ಬೆಂಬಲಿಸಲು ಹೂಡಿಕೆದಾರರ ಒಕ್ಕೂಟ ಸಿದ್ಧವಾಗಿದೆ, ಸೌದಿ ಅರೇಬಿಯಾ ಸುಮಾರು $800 ಮಿಲಿಯನ್ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಹೂಡಿಕೆದಾರರ ಗುಂಪು ಇನ್ನೂ ಹೆಸರಿಸದ ಜಾಗತಿಕ ಕ್ರಿಕೆಟ್ ಲೀಗ್‌ಗೆ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ನಂಬಲಾರ್ಹ ಮೂಲಗಳು ಬಹಿರಂಗಪಡಿಸಿವೆ. ಸೌದಿ ಅರೇಬಿಯಾವು ಪ್ರಾಥಮಿಕ ಹಣಕಾಸು ನೆರವಿನ ನೀಡುವ ನಿರೀಕ್ಷೆಯಿದೆ, ಇದು ಕ್ರಿಕೆಟ್ ಉದ್ಯಮಕ್ಕೆ $ 500 ಮಿಲಿಯನ್ (ಸುಮಾರು $ 800 ಮಿಲಿಯನ್) ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ವರದಿ ಹೇಳಿದೆ.
ಮಾಜಿ ಆಸ್ಟ್ರೇಲಿಯನ್ ಸಾಕರ್ ಎಕ್ಸಿಕ್ಯೂಟಿವ್ ಡ್ಯಾನಿ ಟೌನ್‌ಸೆಂಡ್ ನೇತೃತ್ವದ SRJ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್ ಈ ಲೀಗ್ ಹಿಂದೆ ಇದೆ. ಅಲ್ಲದೇ, ಸೌದಿ ಸಾರ್ವಜನಿಕ ಹೂಡಿಕೆ ನಿಧಿಯು ಆಸ್ಟ್ರೇಲಿಯನ್ ಕ್ರಿಕೆಟ್ ಪ್ರಸಾರಕ ಫಾಕ್ಸ್‌ಟೆಲ್ ಅನ್ನು ಹೊಂದಿರುವ DAZN ನಲ್ಲಿ ಪಾಲನ್ನು ಪಡೆದುಕೊಂಡಿದೆ. ಮ್ಯಾಕ್ಸ್‌ವೆಲ್ ಮತ್ತು ಟೌನ್‌ಸೆಂಡ್ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ವರದಿಗಳು ಪಂದ್ಯಾವಳಿಯು ಐಪಿಎಲ್ ಮತ್ತು ಬಿಬಿಎಲ್‌ನಂತೆಯೇ ಇರಲಿದೆ ಎಂದು ಹೇಳಿವೆ.
ಅಂತಿಮ ನಿರ್ಧಾರ ಜಯ್ ಶಾ ಅವರದು:
ಸೌದಿ ಅರೇಬಿಯಾದಲ್ಲಿ ಫೈನಲ್ ಪಂದ್ಯ ನಡೆಯುವುದರೊಂದಿಗೆ ಲೀಗ್ ಪುರುಷರ ಮತ್ತು ಮಹಿಳೆಯರ ಎರಡೂ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಲೀಗ್‌ಗೆ ಇನ್ನೂ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿಯ ಅನುಮೋದನೆಯ ಅಗತ್ಯವಿದೆ. ಈ ವಿಚಾರದಲ್ಲಿ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.
Advertisement