
ರಾಯ್ಪುರ: ಮತ್ತೆ ಮೈದಾನದಲ್ಲಿ ವಿಂಟೇಜ್ ಯುವಿ ದರ್ಶನವಾಗಿದ್ದು, ನಿನ್ನೆ ರಾಯ್ಪುರದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಫೈನಲ್ನಲ್ಲಿ ಭಾರತದ ಯುವರಾಜ್ ಸಿಂಗ್ ರ ರೌದ್ರಾವತಾರ ದರ್ಶನವಾಗಿದೆ.
ಹೌದು.. ನಿನ್ನೆ ಮುಕ್ತಾಯವಾದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ನಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭರ್ಜರಿಯಾಗಿ ಮಣಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತು.
ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವು 20 ಓವರ್ಗಳಲ್ಲಿ 148 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಡಿಯಾ ಮಾಸ್ಟರ್ಸ್ ತಂಡವು 17.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿತು.
ಯುವಿ-ಟಿನೊ ಬೆಸ್ಟ್ ಜಟಾಪಟಿ
ಪಂದ್ಯದ ಎರಡನೇ ಇನಿಂಗ್ಸ್ ವೇಳೆ, ಅಂದರೆ ಇಂಡಿಯಾ ಮಾಸ್ಟರ್ಸ್ ಬ್ಯಾಟಿಂಗ್ ವೇಳೆ ಯುವರಾಜ್ ಸಿಂಗ್ ಹಾಗೂ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡ ಟಿನೊ ಬೆಸ್ಟ್ ನಡುವೆ ವಾಕ್ಸಮರ ನಡೆಯಿತು. 14ನೇ ಓವರ್‌ನ ಮೊದಲ ಎಸೆತದಲ್ಲಿ ಅಂಬಟಿ ರಾಯುಡು ಆಶ್ಲೇ ನರ್ಸ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ವೇಳೆ ಥರ್ಟಿ ಯಾರ್ಡ್ ಸರ್ಕಲ್ನಲ್ಲಿದ್ದ ಟಿನೊ ಬೆಸ್ಟ್ ಅದೇನೊ ಗೊಣಗಿದ್ದಾರೆ. ಇತ್ತ ಕಡೆಯಿಂದ ಯುವರಾಜ್ ಸಿಂಗ್ ಕೂಡ ಪ್ರತ್ಯುತ್ತರ ನೀಡಿದ್ದಾರೆ.
ಪರಿಣಾಮ ಇಬ್ಬರ ನಡುವೆ ವಾಗ್ಯುದ್ಧ ಏರ್ಪಟ್ಟಿತು. ಮಾತಿಗೆ ಮಾತು ಬೆಳೆಸಿದ ಇಬ್ಬರ ನಡುವೆ ನೋಡ ನೋಡುತ್ತಿದ್ದಂತೆ ವಾಗ್ವಾದ ತಾರಕಕ್ಕೇರಿತು. ವೆಸ್ಟ್ ಇಂಡೀಸ್ ಮಾಸ್ಟರ್ಸ್ ನಾಯಕ ಬ್ರಿಯಾನ್ ಲಾರಾ ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಮಾಡಿದರು. ಅಲ್ಲದೆ ಇಬ್ಬರು ಸಹ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ಕೈಮೀರುತ್ತಿದೆ ಎಂದರಿತ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸುವ ಮೂಲಕ ಇಬ್ಬರನ್ನು ಶಾಂತಗೊಳಿಸಿದರು. ಬಳಿಕ ಅಂಬಾಟಿ ರಾಯುಡು ಕೂಡ ಪರಿಸ್ಥಿತಿ ತಿಳಿಗೊಳಿಸಿದರು. ವಾಗ್ದಾದ ನಿಲ್ಲಿಸುವಂತೆ ಟಿನೊ ಬೆಸ್ಟ್ಗೆ ಮನವಿ ಮಾಡಿದರು.
ಇದೀಗ ಯುವರಾಜ್ ಸಿಂಗ್ ಹಾಗೂ ಟಿನೊ ಬೆಸ್ಟ್ ನಡುವಣ ವಾಕ್ಸಮರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಾಕ್ಸಮರದ ಹೊರತಾಗಿಯೂ ಈ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸುವ ಮೂಲಕ ಇಂಡಿಯಾ ಮಾಸ್ಟರ್ಸ್ ತಂಡವು ಚೊಚ್ಚಲ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ವಿಂಟೇಜ್ 'ಯುವಿ' ದರ್ಶನ
ಪಂದ್ಯದಲ್ಲಿ ಬೌಂಡರಿ ಸಿಡಿಸಿದ ಬಳಿಕ ಟಿನೊ ಕಡೆಗೆ ಯುವಿ ಬ್ಯಾಟ್ ತೋರಿಸಿದ್ದರು. ಇದು 2007ರ ಟಿ20 ವಿಶ್ವಕಪ್ ನೆನಪಿಸಿತು. ಅಂದು ಆಂಡ್ರ್ಯೂ ಫ್ಲಿಂಟಾಫ್ ಅವರೊಂದಿಗೆ ಜಗಳವಾಡಿದ ನಂತರ ಸ್ಟುವರ್ಟ್ ಬ್ರಾಡ್ಗೆ ಸತತ 6 ಸಿಕ್ಸರ್ ಬಾರಿಸಿ ಬ್ಯಾಟ್ ತೋರಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಯುವರಾಜ್ ಮತ್ತು ಟಿನೊ ಬೆಸ್ಟ್ ನಗುತ್ತಾ ಮಾತನಾಡಿದ್ದು ಕಂಡು ಬಂತು. ಟೈಮ್-ಔಟ್ನಲ್ಲಿ ಯುವರಾಜ್ ತಮಾಷೆಯಾಗಿ ಟಿನೊ ಬೆಸ್ಟ್ ಅವರ ಬೆನ್ನನ್ನು ತಟ್ಟುತ್ತಿರುವುದು ಕಂಡುಬಂದಿದೆ.
Advertisement