
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಆಡುತ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಇಂಗ್ಲೆಂಡ್ ಕ್ರಿಕೆಟಿಗರಾದ ಆದಿಲ್ ರಶೀದ್ ಮತ್ತು ಮೊಯೀನ್ ಅಲಿ, ಈ ಹಿಂದೆಯು ಇದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಒಪ್ಪಿಕೊಂಡಿದ್ದು, ಕೆಲವು ಕುತೂಹಲಕಾರಿ ಪ್ರತಿಕ್ರಿಯೆಗಳನ್ನು ಪಾಡ್‌ಕ್ಯಾಸ್ಟ್‌ನಲ್ಲಿ ನಡೆದ ಸಂಭಾಷಣೆಯಲ್ಲಿ ನೀಡಿದ್ದಾರೆ. ಬೇರೆ ದೇಶಕ್ಕಾಗಿ ಆಡುವ ಬದಲು ತಾನು ಹುಟ್ಟಿದ ದೇಶದಲ್ಲಿನ ತಂಡಕ್ಕಾಗಿ ಆಡಿ ಅದನ್ನು ಸಾಧಿಸಲು ಪ್ರಯತ್ನಿಸುತ್ತೇನೆ ಎಂದು ಆದಿಲ್ ಹೇಳಿದ್ದರೆ, ರಾಷ್ಟ್ರದ ಆಯ್ಕೆಗಿಂತ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದು ಮುಖ್ಯ ಎಂದು ಮೊಯೀನ್ ತಿಳಿಸಿದ್ದಾರೆ.
'ನಾನು ಇಲ್ಲಿ ಹುಟ್ಟಿದ್ದರೆ, ಪಾಕಿಸ್ತಾನದಲ್ಲಿ ಹುಟ್ಟಿದ್ದರೆ, ಭಾರತದಲ್ಲಿ ಹುಟ್ಟಿದ್ದರೆ ಅಲ್ಲಿಯೇ ನಾನು ಆಡಲು ನೋಡುತ್ತೇನೆ. ನಾನು ಎಲ್ಲೇ ಹುಟ್ಟಿದ್ದರೂ ಖಂಡಿತವಾಗಿಯೂ ನಾನು ಆಡಲು ಪ್ರಯತ್ನಿಸುವ ದೇಶ ಅದಾಗಿರುತ್ತದೆ' ಎಂದು ಬಿಯರ್ಡ್ ಬಿಫೋರ್ ವಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಆದಿಲ್ ಹೇಳಿದರು.
ಕಾರ್ಯಕ್ರಮದ ನಿರೂಪಕ ತಾನು 'ಬ್ರಿಟಿಷ್-ಏಷ್ಯನ್' ಎಂದು ಗುರುತಿಸಿಕೊಳ್ಳುವುದಾಗಿ ಮತ್ತು ಅವಕಾಶ ಸಿಕ್ಕರೆ ಇಂಗ್ಲೆಂಡ್‌ಗಿಂತ ಪಾಕಿಸ್ತಾನ ಪರ ಆಡಲು ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದರು. ಇದಕ್ಕೆ ಕ್ರಿಕೆಟಿಗ ಮೊಯೀನ್ ಪ್ರತಿಕ್ರಿಯಿಸಿ, ಈ ಹೇಳಿಕೆ ಕ್ರೇಜಿಯಾಗಿದೆ. ಈ ರೀತಿಯ ಆಲೋಚನೆಯು ನನ್ನ ಮನಸ್ಸಿನಲ್ಲಿ ಎಂದಿಗೂ ಬಂದಿಲ್ಲ ಎಂದರು.
ಆದಿಲ್ ರಶೀದ್ ಪ್ರತಿಕ್ರಿಯಿಸಿ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಪರ ಆಡುವ ಆಲೋಚನೆ ಎಂದಿಗೂ ಬಂದಿಲ್ಲ ಎಂದು ಹೇಳಿದರು. 'ನಾನು ಪಾಕಿಸ್ತಾನಕ್ಕೆ ಹೋಗಿ ಅವರ ಪರವಾಗಿ ಆಡುತ್ತೇನೆ ಎಂದು ಹೇಳಲು ನನಗೆ ಎಂದಿಗೂ ಅಂತಹ ಆಲೋಚನೆ ಮನಸ್ಸಿಗೆ ಬಂದಿಲ್ಲ. ನಾನು ಏಕೆ ಹಾಗೆ ಮಾಡುತ್ತೇನೆ?' ಎಂದರು.
ಆದಿಲ್ ರಶೀದ್ ಅವರು ಪಾಕಿಸ್ತಾನ ಪರ ಆಡಲು ನಿಯಮವು ಅಡೆತಡೆಯಾಗಿರಬಹುದು ಎಂದು ನಿರೂಪಕ ಹೇಳಿದಾಗ, ಮೊಯೀನ್ ಅಲಿ ಮತ್ತು ಆದಿಲ್ ರಶೀದ್ ಇಬ್ಬರೂ ಮಧ್ಯಪ್ರವೇಶಿಸಿ, ತಾವು ಪಾಕಿಸ್ತಾನ ಪರ ಆಡದಿರಲು ಕಾರಣ ಯಾವುದೇ ನಿಯಮವಲ್ಲ. ಬದಲಿಗೆ, ನಾವು ಪಾಕಿಸ್ತಾನ ಪರ ಆಡಲು ಅರ್ಹತೆ ಹೊಂದಿಲ್ಲ ಎಂದು ಹೇಳಿದರು.
ಇಂಗ್ಲೆಂಡ್ ಪರ ಆಡುವ ಅವಕಾಶ ಇಲ್ಲದಿದ್ದರೆ, ಪಾಕಿಸ್ತಾನ ಪರ ಆಡುತ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ರಶೀದ್, 'ಇಲ್ಲ, ಏಕೆಂದರೆ ನಾನು ಇಂಗ್ಲೆಂಡ್‌ನಲ್ಲಿ ಜನಿಸಿರುವೆ. ಹೀಗಾಗಿ, ಇಂಗ್ಲೆಂಡ್ ವ್ಯವಸ್ಥೆಯ ಮೂಲಕವೇ ಹೋಗಲು ಪ್ರಯತ್ನಿಸುತ್ತೇನೆ' ಎಂದರು.
ನಂತರ ರಶೀದ್ ಅವರು ಇಂಗ್ಲೆಂಡ್‌ನಲ್ಲಿ ಕಂಟ್ರಿ ಕ್ರಿಕೆಟ್ ಆಡಲು ಅರ್ಹರೇ ಎಂದು ಕೇಳಿದರು. ಇದಕ್ಕೆ ಮೊಯೀನ್, ಅವರು ಅರ್ಹರು. ಆದರೆ ವಿದೇಶಿ ಆಟಗಾರನಾಗಿ ಮಾತ್ರ ಎಂದು ಹೇಳಿದರು. ನಂತರ ರಶೀದ್, 'ವಾಸ್ತವವಾಗಿ ನಾನು ಅಂತಹ ಯಾವುದರ ಬಗ್ಗೆಯೂ ಯೋಚಿಸಿಲ್ಲ. ಆದರೆ, ನೀವು ಕ್ರಿಕೆಟ್ ಅನ್ನು ಎಷ್ಟು ಪ್ರೀತಿಸುತ್ತೀರಿ ಮತ್ತು ನೀವು ನಿಜವಾಗಿಯೂ ಅದನ್ನು ಎಷ್ಟು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ನಾನು ಅದರ ಬಗ್ಗೆ ಯೋಚಿಸುತ್ತೇನೆ. ಹಣಕಾಸಿನ ಭಾಗವಿದೆ, ಜೀವನಶೈಲಿ ಜೊತೆಗೆ ನೀವು ಪರಿಗಣಿಸಬೇಕಾದ ಬಹಳಷ್ಟು ವಿಷಯಗಳಿವೆ' ಎಂದು ತಿಳಿಸಿದರು.
ನಿರೂಪಕರು ಅದೇ ಪ್ರಶ್ನೆಯನ್ನು ಮೊಯೀನ್ ಅಲಿಗೆ ಕೇಳಿದಾಗ, ಅವರು ಜಗತ್ತಿನ ಯಾವುದೇ ಅಂತರರಾಷ್ಟ್ರೀಯ ತಂಡಕ್ಕಾಗಿ ಆಡುತ್ತೇನೆ ಎಂದು ಹೇಳಿದರು.
Advertisement