ಕ್ರಿಕೆಟಿಗ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾಗೆ ಕೊನೆಗೂ ವಿಚ್ಛೇದನ ನೀಡಿದ ನ್ಯಾಯಾಲಯ!
ಮುಂಬೈ: ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಕೋರಿ ಸಲ್ಲಿಸಿದ್ದ ಜಂಟಿ ಅರ್ಜಿಯನ್ನು ಗುರುವಾರ ಇಲ್ಲಿನ ಕೌಟುಂಬಿಕ ನ್ಯಾಯಾಲಯವು ಪುರಸ್ಕರಿಸಿದೆ. ದಂಪತಿ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಚಾಹಲ್ ಮತ್ತು ವರ್ಮಾ ಪರಸ್ಪರ ಒಪ್ಪಿ ವಿಚ್ಛೇದನಕ್ಕಾಗಿ ಸಲ್ಲಿಸಿದ್ದ ಜಂಟಿ ಅರ್ಜಿಯ ಕುರಿತು ಕೌಟುಂಬಿಕ ನ್ಯಾಯಾಲಯವು ತೀರ್ಪು ನೀಡಿದೆ ಎಂದು ಚಾಹಲ್ ಪರ ವಕೀಲ ನಿತಿನ್ ಗುಪ್ತಾ ಹೇಳಿದ್ದಾರೆ.
ಚಾಹಲ್ ಮತ್ತು ವರ್ಮಾ 2020ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. 2022ರ ಜೂನ್‌ನಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಈ ವರ್ಷದ ಫೆಬ್ರುವರಿ 5 ರಂದು, ಅವರು ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಜಂಟಿ ಅರ್ಜಿಯನ್ನು ಸಲ್ಲಿಸಿದ್ದರು.
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಚಾಹಲ್ ಭಾಗವಹಿಸುತ್ತಿರುವುದರಿಂದ ಅವರು ನಂತರ ಲಭ್ಯವಿರುವುದಿಲ್ಲ ಎಂಬ ಅಂಶವನ್ನು ಪರಿಗಣಿಸಿ, ಗುರುವಾರದೊಳಗೆ ವಿಚ್ಛೇದನ ಅರ್ಜಿ ಕುರಿತು ತೀರ್ಪು ನೀಡುವಂತೆ ಬಾಂಬೆ ಹೈಕೋರ್ಟ್ ಬುಧವಾರ (ಮಾ.19) ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿತ್ತು.
ಐಪಿಎಲ್ ಟಿ20 ಕ್ರಿಕೆಟ್ ಟೂರ್ನಮೆಂಟ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಚಾಹಲ್ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಪ್ರತಿ ದಂಪತಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಚಾಹಲ್ ಮತ್ತು ವರ್ಮಾ ಕಳೆದ ಎರಡು ವರ್ಷಗಳಿಂದಲೂ ಬೇರೆ ಬೇರೆಯಾಗಿ ವಾಸಿಸುತ್ತಿರುವುದರಿಂದ ಆ ಅವಧಿಯನ್ನು ಬುಧವಾರ ಹೈಕೋರ್ಟ್ ಮನ್ನಾ ಮಾಡಿದೆ.
ಕ್ರಿಕೆಟಿಗ ಮತ್ತು ವರ್ಮಾ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಅವರ ಪ್ರಕರಣದಲ್ಲಿ ಈ ಅವಧಿಯನ್ನು ವಜಾ ಮಾಡಬೇಕೆಂದು ಕೋರಿ ದಂಪತಿ ಹೈಕೋರ್ಟ್‌ನಲ್ಲಿ ಜಂಟಿ ಅರ್ಜಿ ಸಲ್ಲಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ