
ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ ಬಿಟ್ಟು ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ನೋಟಿಸ್ ಕೊಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಆಟಗಾರ ಕೊಟ್ಟ ಉತ್ತರಕ್ಕೆ ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿ ಕೈ ಸುಟ್ಟುಕೊಂಡಿರುವ ಪಾಕಿಸ್ತಾನ ಸಾಲ ಶೂಲಕ್ಕೆ ಸಿಲುಕಿ ತನ್ನದೇ ದೇಶದ ಪ್ರಜೆಗಳಿಂದ ಹಿಗ್ಗಾಮುಗ್ಗಾ ಟೀಕೆಗೆ ಒಳಗಾಗುತ್ತಿದೆ. ಏತನ್ಮಧ್ಯೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಗಿರುವ ನಷ್ಟವನ್ನು ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಪಡೆಯಲು ಪಾಕಿಸ್ತಾನ ಮುಂದಾಗಿದ್ದು, ಇದೇ ಕಾರಣಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಸಮಾನಾಂತರವಾಗಿ ಪಾಕಿಸ್ತಾನ ಸೂಪರ್ ಲೀಗ್ ವೇಳಾಪಟ್ಟಿಯನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ.
ಅಂತೆಯೇ ಕೆಲವು ಆಟಗಾರರು ಇದೀಗ ಉಭಯ ದೇಶಗಳ ಲೀಗ್‌ಗಳಲ್ಲಿ ಆಡಬೇಕಾದ ಕಾರಣ ಐಪಿಎಲ್ ಅನ್ನೇ ಆಯ್ಕೆ ಮಾಡಿಕೊಂಡಿರುವುದು ಪಿಸಿಬಿಯ ಕಣ್ಣು ಕೆಂಪಾಗಿಸಿದ್ದು, ಪ್ರಮುಖವಾಗಿ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಪಿಎಸ್ ಎಲ್ ಬಿಟ್ಟು ಐಪಿಎಲ್ ಗೆ ಬಂದಿರುವುದು ಪಿಸಿಬಿ ಮುಜುಗರಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಆಟಗಾರನಿಗೆ ನೋಟಿಸ್ ಜಾರಿ ಮಾಡಿತ್ತು.
ಆಫ್ರಿಕಾ ಆಲ್‌ರೌಂಡರ್ ಕೊಟ್ಟ ಉತ್ತರಕ್ಕೆ PCB ಬೇಸ್ತು
ಪಿಎಸ್ ಎಲ್ ಬಿಟ್ಟು ಐಪಿಎಲ್ ನತ್ತ ಬಂದಿರುವ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕಾರ್ಬಿನ್ ಬಾಷ್ ಗೆ ಪಿಸಿಬಿ ನೋಟಿಸ್ ಜಾರಿ ಮಾಡಿದ್ದು, ಉತ್ತರಿಸುವಂತೆ ಕೇಳಿತ್ತು. ಆದರೆ ಈಗ ಆಫ್ರಿಕಾ ಆಲ್‌ರೌಂಡರ್ ಕೊಟ್ಟ ಉತ್ತರಕ್ಕೆ PCB ಅಧಿಕಾರಿಗಳೇ ಬೇಸ್ತು ಬಿದ್ದಿದ್ದಾರೆ.
ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಫರ್ ಬಂದ ಕೂಡಲೇ ಪಾಕಿಸ್ತಾನ ಸೂಪರ್ ಲೀಗ್ (Pakistan Super League) ತೊರೆದು ಐಪಿಎಲ್ (IPL) ಕಡೆ ಮುಖಾ ಮಾಡಿದ್ದ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕಾರ್ಬಿನ್ ಬಾಷ್ಗೆ, ಪಿಸಿಬಿ ನೋಟಿಸ್ ನೀಡಿತ್ತು. ಈ ನೋಟಿಸ್ಗೆ ಪ್ರತಿಕ್ರಿಯಿಸಿರುವ ಕಾರ್ಬಿನ್ ಬಾಷ್, ‘ಪಿಎಸ್ಎಲ್ ಅನ್ನು ಅಗೌರವಿಸುವ ಉದ್ದೇಶದಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಬದಲಿಗೆ ನನ್ನ ಮುಂದಿನ ಭವಿಷ್ಯಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.
‘ಪೇಶಾವರ್ ಝಲ್ಮಿ ಮತ್ತು ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ತನಗೆ ಬಹುತೇಕ ಸಮಾನ ವೇತನವನ್ನು ನೀಡಿದ್ದವು. ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಪೇಶಾವರ್ ಝಲ್ಮಿ ತಂಡ ನನಗೆ 50-75 ಲಕ್ಷ ರೂ. ವೇತನ ನೀಡಿತು. ಇತ್ತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನನ್ನನ್ನು 75 ಲಕ್ಷ ರೂ. ನೀಡಿ ಖರೀದಿಸಿದೆ. ಆದಾಗ್ಯೂ, ಈ ಫ್ರ್ಯಾಂಚೈಸ್‌ಗೆ ಸೇರುವುದರಿಂದ ತನ್ನ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಹೀಗಾಗಿ ನಾನು ಐಪಿಎಲ್ಗೆ ಮನ್ನಣೆ ನೀಡಿದೆ ಎಂದು ಬಾಷ್ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ. ಇದೀಗ ಬಾಷ್ ನೀಡಿರುವ ಉತ್ತರ ಪಿಸಿಬಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಮುಂದೇನು ಕ್ರಮ ಕೈಗೊಳ್ಳಬೇಕು ಎಂದು ಚಿಂತಿಸುವಂತೆ ಮಾಡಿದೆ.
ಬಾಷ್ ವಿರುದ್ಧ ಪಿಸಿಬಿ ಕ್ರಮಕ್ಕೆ ಒತ್ತಾಯ
ಇನ್ನು ಪಿಎಸ್‌ಎಲ್ ಫ್ರಾಂಚೈಸಿಗಳು ಬಾಷ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಸಿಬಿ ಮೇಲೆ ಒತ್ತಡ ಹೇರಿವೆ. ಬಾಷ್ ಪಿಎಸ್ಎಲ್ಅನ್ನು ಅವಮಾನಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಫ್ರಾಂಚೈಸಿಗಳು ಒತ್ತಡ ಹೇರುತ್ತಿವೆ. ಐಪಿಎಲ್ ಆರಂಭಕ್ಕೂ ಮುಂಚಿತವಾಗಿ ತನ್ನ ಹೆಸರನ್ನು ಹಿಂತೆಗೆದುಕೊಂಡ ಹ್ಯಾರಿ ಬ್ರೂಕ್ ಅವರನ್ನು ಬಿಸಿಸಿಐ ನಿಷೇಧಿಸಿದಂತೆ, ಬಾಷ್ ಅವರನ್ನು ಕೂಡ ಪಿಎಸ್ಎಲ್ ನಿಂದ ನಿಷೇಧಿಸಬೇಕು ಎಂಬುದು ಪಿಎಸ್ಎಲ್ ಫ್ರಾಂಚೈಸಿಗಳ ಆಗ್ರಹವಾಗಿದೆ.
ಅಡಕತ್ತರಿಯಲ್ಲಿ ಪಿಸಿಬಿ
ಫ್ರಾಂಚೈಸಿಗಳ ಒತ್ತಡದ ಹೊರತಾಗಿಯೂ ಪಿಸಿಬಿ ಆಟಗಾರನ ನಿಷೇಧಕ್ಕೆ ಮುಂದಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಐಪಿಎಲ್ನಂತೆ ಪಿಎಸ್ಎಲ್‌ನಲ್ಲಿ ಬಾಷ್ ಅವರನ್ನು ನಿಷೇಧಿಸುವುದರಿಂದ ಇತರ ವಿದೇಶಿ ಆಟಗಾರರು ಪಿಎಸ್ಎಲ್‌ನಿಂದ ದೂರವಾಗಬಹುದು ಎಂಬ ಭಯ ಪಿಸಿಬಿಗೆ ಕಾಡಲಾರಂಭಿಸಿದೆ.
Advertisement